ಬೆಂಗಳೂರು ಆ 24: ಕೈಗಾರಿಕೆಗಳಿಗೆ ಒಟ್ಟು 20 ಸೇವೆಗಳನ್ನು ಅಫಿಡವಿಟ್ ಆಧರಿತ ಅನುಮೋದನೆ (ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್- ಎಬಿಸಿ) ವಿಧಾನದಲ್ಲಿ ಒದಗಿಸಲು ಅವಕಾಶ ಕೊಡಲಿರುವ ಮತ್ತು ಏಕಗವಾಕ್ಷಿ ಪದ್ಧತಿಗೆ ಕಾನೂನಿನ ಮಾನ್ಯತೆ ತಂದುಕೊಡಲಿರುವ ಕರ್ನಾಟಕ ಕೈಗಾರಿಕಾ ಸೌಲಭ್ಯ (ತಿದ್ದುಪಡಿ) ವಿಧೇಯಕ-2026 ಅನ್ನು ವಿಧಾನ ಮಂಡಲದ ಉಭಯ ಸದನಗಳು ಸೋಮವಾರ ಅಂಗೀಕರಿಸಿದವು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಈ ವಿಧೇಯಕವನ್ನು ವಿಧಾನಸಭೆ ಮತ್ತು ವಿಧಾನಪರಿಷತ್ ಎರಡರಲ್ಲೂ ಮಂಡಿಸಿದರು.
ಬಳಿಕ ಮಸೂದೆ ಬಗ್ಗೆ ಮಾತನಾಡಿದ ಸಚಿವರು, ರಾಜ್ಯವು 2002ರಲ್ಲೇ ಕೈಗಾರಿಕಾ ಸೌಲಭ್ಯ ಕಾಯಿದೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದ ಖ್ಯಾತಿ ಹೊಂದಿದೆ. 2020ರಲ್ಲಿ ಇದಕ್ಕೆ ತಿದ್ದುಪಡಿ ತಂದು ಎಬಿಸಿ ಪದ್ಧತಿಯಡಿ 15 ಸೇವೆಗಳನ್ನು ಕೊಡಲಾಗುತ್ತಿತ್ತು. ಈಗ ಇನ್ನೂ 5 ಸೇವೆಗಳನ್ನು ಸೇರಿಸಲಾಗುತ್ತಿದೆ. ಜತೆಗೆ ಏಕಗವಾಕ್ಷಿ ವ್ಯವಸ್ಥೆಗೆ ಕಾನೂನಿನ ಮನ್ನಣೆ ನೀಡಿ, ಕೈಗಾರಿಕೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಅದರ ಮೂಲಕವೇ ಸಲ್ಲಿಸುವ ಮತ್ತು ಮುಂದಿನ ಪ್ರಕ್ರಿಯೆಗಳನ್ನು ತ್ವರಿತವಾಗಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಇದು ಸುಗಮ ವಾಣಿಜ್ಯ ಸಂಸ್ಕೃತಿ ಪ್ರಕ್ರಿಯೆಯ ಭಾಗವಾಗಿದೆ ಎಂದಿದ್ದಾರೆ.
ಹೀಗಾಗಿ ಇನ್ನು ಮುಂದೆ ಏಕಗವಾಕ್ಷಿ ವ್ಯವಸ್ಥೆಯಡಿ ಬರುವ ಕೆವೈಎ, ಕೆವೈಸಿ, ಸಿಂಗಲ್ ಸೈನ್-ಆನ್, ಡ್ಯಾಶ್ ಬೋರ್ಡ್, ಆಡಿಟ್ ಟ್ರಯಲ್, ಟಿಎಟಿ ಮಾನಿಟರಿಂಗ್, ಎಪಿಐ ಇಂಟಿಗ್ರೇಶನ್ ಮತ್ತು ಒನ್ಸ್-ಓನ್ಲಿ ಸಬ್ಮಿಶನ್ ಮುಂತಾದ ಸೌಲಭ್ಯಗಳಿಗೆ ಕಾನೂನಿನ ಬಲ ಬರಲಿದೆ. ಜತೆಗೆ ರಾಜ್ಯ ಮಟ್ಟದ ನೋಡಲ್ ಏಜೆನ್ಸಿ, ಸಮನ್ವಯ ಸಮಿತಿ ಮತ್ತು ಕೇಂದ್ರ ತಪಾಸಣಾ ವ್ಯವಸ್ಥೆಗೆ ಬಲ ಬರಲಿದೆ. ಒಟ್ಟಾರೆಯಾಗಿ ಕೈಗಾರಿಕೆಗಳು ತಮ್ಮ ಕಾಮಗಾರಿ ಇತ್ಯಾದಿ ಆರಂಭಿಸಿ, ಬಳಿಕ ಅನುಮೋದನೆ ಪಡೆದುಕೊಳ್ಳಬಹುದು ಎಂದು ಅವರು ವಿವರಿಸಿದ್ದಾರೆ.
ಸರಕಾರದ ಮಟ್ಟದಲ್ಲಿ ಕೈಗಾರಿಕೆಗಳಿಗೆ ಬೇಕಾಗುವ ಒಪ್ಪಿಗೆ ಇತ್ಯಾದಿಗಳು ಸರಳವಾಗಿದ್ದು, ಪಾರದರ್ಶಕವಾಗಿರಬೇಕು. ಈ ಮೂಲಕ ಬಂಡವಾಳಸ್ನೇಹಿ ವ್ಯವಸ್ಥೆಯನ್ನು ನಿರ್ಮಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.
