ರಾಜ್ಯದಲ್ಲಿ ಒಂದೆಡೆ ಮಳೆ ಕೊರತೆಯಿಂದ ರೈತರು ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದರೆ, ಮತ್ತೊಂದೆಡೆ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಕೆಲವು ಪ್ರಮುಖ ಜಲಾಶಯಗಳಿಗೆ ಉತ್ತಮ ಪ್ರಮಾಣದ ನೀರು ಹರಿದು ಬರುತ್ತಿದ್ದು, ನೀರಿನ ಮಟ್ಟ ವೇಗವಾಗಿ ಏರಿಕೆಯಾಗುತ್ತಿದೆ. ಇದರ ಪರಿಣಾಮವಾಗಿ ಜಲಾಶಯಗಳಿಂದ ನೀರು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಕೊಡಗು ಜಿಲ್ಲೆಯ ಹಾರಂಗಿ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಜಲಾಶಯವು ಶೀಘ್ರದಲ್ಲೇ ಗರಿಷ್ಠ ಮಟ್ಟ ತಲುಪುವ ನಿರೀಕ್ಷೆ ಇದ್ದು, ಇಂದು ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಸುಮಾರು 3,000 ರಿಂದ 5,000 ಕ್ಯೂಸೆಕ್‌ಗಿಂತ ಹೆಚ್ಚು ನೀರನ್ನು ನದಿಗೆ ಹರಿಸುವ ಸಾಧ್ಯತೆ ಇದೆ. ಹೀಗಾಗಿ ಕೆಳಭಾಗದ ನಿವಾಸಿಗಳು ಹಾಗೂ ರೈತರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇನ್ನೊಂದೆಡೆ, ಕೃಷ್ಣಾ ನದಿ ಮೇಲ್ಭಾಗದಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದ ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಬಸವಸಾಗರ ಜಲಾಶಯಕ್ಕೆ ಪ್ರಸ್ತುತ ಸುಮಾರು 70 ಸಾವಿರ ಕ್ಯೂಸೆಕ್ ನೀರು ಒಳಹರಿಯುತ್ತಿದ್ದು, ಹಂತ ಹಂತವಾಗಿ 30 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರಾಯಚೂರು, ಲಿಂಗಸುಗೂರು ಹಾಗೂ ದೇವದುರ್ಗ ಭಾಗದ ನದಿ ಪಾತ್ರದ ನಿವಾಸಿಗಳು ಹಾಗೂ ಜಾನುವಾರುಗಳನ್ನು ನದಿ ತೀರಕ್ಕೆ ಕರೆದೊಯ್ಯಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಪ್ರದೇಶದಲ್ಲೂ ಮಳೆಯ ಅಬ್ಬರ ಮುಂದುವರಿದಿದೆ. ಶಿರಸಿ ತಾಲೂಕಿನ ಕಾಗೇರಿ ಗ್ರಾಮದಲ್ಲಿ ಬರೂರು ಹೊಳೆ ಉಕ್ಕಿ ಹರಿದ ಪರಿಣಾಮ ಭತ್ತದ ಗದ್ದೆಗಳು, ತೋಟಗಳು ಹಾಗೂ ರಸ್ತೆ ಜಲಾವೃತಗೊಂಡಿವೆ. ಅಘನಾಶಿನಿ ನದಿಯಲ್ಲಿ ಪ್ರವಾಹದ ನೀರಿನೊಂದಿಗೆ ಹರಿದು ಬಂದ ಸುಮಾರು 12 ಅಡಿ ಉದ್ದದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಮತ್ತೊಂದೆಡೆ, ಕಾರವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ–66ರ ಮುದುಗಾದ ಬಳಿ ಭೂ ಕುಸಿತ ಸಂಭವಿಸಿದ್ದು, ಕಲ್ಲುಬಂಡೆಗಳು ರಸ್ತೆಗೆ ಉರುಳಿಬಿದ್ದಿವೆ. ಜೋಯಿಡಾ ತಾಲೂಕಿನ ಕಾತೇಲಿ ಗ್ರಾಮದಲ್ಲಿ ಮನೆಯ ಮೇಲೆ ಅಡಿಕೆ ಮರ ಬಿದ್ದ ಪರಿಣಾಮ ಸಾವಿರಾರು ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿದ್ದು, ಮನೆಯವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲೂ ಮಳೆ ತೀವ್ರಗೊಂಡಿದೆ. ಭಾರತೀಯ ಹವಾಮಾನ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆ-ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿಯೂ ನಿರಂತರ ಮಳೆ ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಅಂಗನವಾಡಿ, ಶಾಲೆಗಳು, ಪದವಿಪೂರ್ವ ಹಾಗೂ ಡಿಪ್ಲೋಮಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸಾರ್ವಜನಿಕರು ನದಿ, ಹಳ್ಳ, ಕೊಳ್ಳ ಹಾಗೂ ಸಮುದ್ರ ತೀರಗಳಿಗೆ ತೆರಳದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬರಲು ಸೂಚಿಸಿದೆ.
