ಕರ್ನಾಟಕವನ್ನ ಚಿನ್ನದ ನಾಡು, ಗಂಧದ ಬೀಡು ಎಂದು ಪದೇ ಪದೇ ಸಾಬೀತುಪಡಿಸುವಂತಹ ಮಹತ್ವದ ಘಟನೆಗಳು ನಡೆಯುತ್ತಿವೆ. ಪಶ್ಚಿಮ ಘಟ್ಟದ ದಟ್ಟವಾದ ನಿತ್ಯಹರಿದ್ವರ್ಣ ಕಾಡುಗಳು ಶ್ರೀಗಂಧದ ಮರಗಳನ್ನು ಯಥೇಚ್ಛವಾಗಿ ಹೊಂದಿವೆ. ಇದೀಗ ರೈತರೂ ಸಹ ರಾಜ್ಯದಾದ್ಯಂತ ಶ್ರೀಗಂಧವನ್ನು ಬೆಳೆಯುವಲ್ಲಿ ಆಸಕ್ತಿ ತೋರುತ್ತಿದ್ದಾರೆ. ಇದರ ಜೊತೆಗೆ, ಕೋಲಾರದ ಕೆಜಿಎಫ್ ಮತ್ತು ರಾಯಚೂರಿನ ಹಟ್ಟಿ ಚಿನ್ನದ ಗಣಿಯ ಮೂಲಕ ಕರ್ನಾಟಕವು ಚಿನ್ನದ ಗಣಿಗಾರಿಕೆಯ ಇತಿಹಾಸವನ್ನು ಹೊಂದಿದೆ.
ಈಗ ಇತಿಹಾಸಕ್ಕೆ ಹೊಸ ಪುಟ ಸೇರಿಸುವಂತೆ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದ ಚಿನ್ನ ಮತ್ತು ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ. ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 65 ಸ್ಥಳಗಳಲ್ಲಿ ಚಿನ್ನ ಮತ್ತು ಇತರ ಅಪರೂಪದ ಖನಿಜ ನಿಕ್ಷೇಪಗಳು ಇರುವುದು ದೃಢಪಟ್ಟಿದೆ.
ಕೊಪ್ಪಳ ಜಿಲ್ಲೆಯ ಅಮರಾಪುರ ಬ್ಲಾಕ್‌ನಲ್ಲಿ ಪತ್ತೆಯಾಗಿರುವ ಚಿನ್ನದ ನಿಕ್ಷೇಪದ ಪ್ರಮಾಣ. ಇಲ್ಲಿ ಪ್ರತಿ ಟನ್ ಮಣ್ಣಿಗೆ 12-14 ಗ್ರಾಂ ಚಿನ್ನ ಇರುವುದು ಕಂಡುಬಂದಿದೆ. ಇದು ಅಪರೂಪದ ಪ್ರಕರಣವಾಗಿದೆ. ಸಾಮಾನ್ಯವಾಗಿ, ಹಟ್ಟಿ ಚಿನ್ನದ ಗಣಿಯಂತಹ ಸ್ಥಳಗಳಲ್ಲಿ ಪ್ರತಿ ಟನ್ ಮಣ್ಣಿನಲ್ಲಿ 2 ರಿಂದ 2.5 ಗ್ರಾಂ ಚಿನ್ನ ಮಾತ್ರ ಇರುತ್ತದೆ. ಆದರೆ, ಅಮರಾಪುರದ ಈ ಪ್ರಮಾಣವು ಗಣಿಗಾರಿಕೆ ದೃಷ್ಟಿಯಿಂದ ಅತ್ಯಂತ ಲಾಭದಾಯಕವಾಗಿದೆ. ಈ ಹಿಂದೆ 2020 ರಲ್ಲಿ ಈ ಚಿನ್ನದ ನಿಕ್ಷೇಪಗಳು ಪತ್ತೆಯಾಗಿದ್ದರೂ, 2024-25 ರಿಂದ ಕೆಲಸ ಮುಂದುವರೆದಿದೆ.
ಚಿನ್ನದ ಜೊತೆಗೆ, ಎಲೆಕ್ಟ್ರಿಕ್ ವಾಹನಗಳ (EV) ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಬ್ಯಾಟರಿಗಳಲ್ಲಿ ಬಳಸಲಾಗುವ ಲಿಥಿಯಂ ನಿಕ್ಷೇಪಗಳೂ ಪತ್ತೆಯಾಗಿರುವುದು ಮಹತ್ವದ ಬೆಳವಣಿಗೆ. ಲಿಥಿಯಂಗೆ ಭಾರತದಲ್ಲಿ ಭಾರಿ ಬೇಡಿಕೆಯಿದೆ ಮತ್ತು ಪ್ರಸ್ತುತ ಇದನ್ನು ಆಫ್ರಿಕಾ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಲಿಥಿಯಂ ಉತ್ಪಾದನೆಯಾದರೆ, ಎಲೆಕ್ಟ್ರಿಕ್ ಕಾರು ಮತ್ತು ಬೈಕ್‌ಗಳ ಬೆಲೆ ಕಡಿಮೆಯಾಗಲು ಸಹಾಯವಾಗುತ್ತದೆ ಮತ್ತು ವಿದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ರಸೋಯಿ ಜಿಲ್ಲೆಯಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾದ ನಂತರ, ಈಗ ಕರ್ನಾಟಕದ ರಾಯಚೂರಿನ ಅಮರೇಶ್ವರದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ. ಈ ನಿಕ್ಷೇಪವು 2023 ರಲ್ಲಿ ಕಂಡುಬಂದಿದೆ. ಈ ಹಿಂದೆ ಮಂಡ್ಯ ಮತ್ತು ಯಾದಗಿರಿ ಜಿಲ್ಲೆಗಳಲ್ಲಿಯೂ ಸುಮಾರು 1,600 ಟನ್‌ಗಳಷ್ಟು ಲಿಥಿಯಂ ನಿಕ್ಷೇಪ ಪತ್ತೆಯಾಗಿರುವುದಾಗಿ ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿತ್ತು. ಆದರೆ, ಈ ಎಲ್ಲ ಸ್ಥಳಗಳಲ್ಲಿ ಇನ್ನೂ ಲಿಥಿಯಂ ಹೊರತೆಗೆಯುವ ಕಾರ್ಯ ಆರಂಭವಾಗಿಲ್ಲ.
ಈ ಅಮೂಲ್ಯ ನಿಕ್ಷೇಪಗಳ ಹೊರತೆಗೆಯುವಿಕೆಗೆ ಈಗ ಎದುರಾಗಿರುವ ದೊಡ್ಡ ಸವಾಲು ಅರಣ್ಯ ಸಂರಕ್ಷಣೆ. ಚಿನ್ನ ಮತ್ತು ಲಿಥಿಯಂ ನಿಕ್ಷೇಪ ಪತ್ತೆಯಾಗಿರುವ ಜಾಗವು ಸಂಪೂರ್ಣವಾಗಿ ಮೀಸಲು ಅರಣ್ಯ ಪ್ರದೇಶವಾಗಿದೆ. ಲಿಥಿಯಂ ಹೊರತೆಗೆಯುವ ಪ್ರಸ್ತಾವನೆ ಲಿಂಗಸಗೂರು ಮೀಸಲು ಅರಣ್ಯ ಪ್ರದೇಶದಲ್ಲಿದೆ ಮತ್ತು ಚಿನ್ನದ ನಿಕ್ಷೇಪವು ಕುಷ್ಟಗಿಯ ಅಮರಾಪುರ ಮೀಸಲು ಅರಣ್ಯ ಪ್ರದೇಶದಲ್ಲಿದೆ.
ಈ ನಿಕ್ಷೇಪಗಳನ್ನು ಹೊರತೆಗೆಯಲು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಅರಣ್ಯ ಇಲಾಖೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರಣ್ಯ ಇಲಾಖೆಯ ಅಧಿಕಾರಿಗಳು, ಗಣಿಗಾರಿಕೆಗಾಗಿ ನಾವು ಸಂರಕ್ಷಿತ ಅರಣ್ಯ ಪ್ರದೇಶಗಳನ್ನು ತೆರೆಯಲು ಸಾಧ್ಯವಿಲ್ಲ. ಅರಣ್ಯಗಳು ಅತ್ಯಗತ್ಯ ಪರಿಸರ ಸಂಪತ್ತು ಎಂದು ಹೇಳಿದ್ದಾರೆ. ಇದರ ಹೊರತಾಗಿಯೂ, ಅನುಮತಿ ನೀಡುವಂತೆ ಇಲಾಖೆಯ ಮೇಲೆ ಒತ್ತಡವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಗಣಿಗಾರಿಕೆಯನ್ನು ನಾಲ್ಕು ಹಂತಗಳಲ್ಲಿ ನಡೆಸಲು ಯೋಜಿಸಲಾಗಿದೆ, ಅದರಲ್ಲಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮೊದಲ ಎರಡು ಹಂತಗಳು (ಶೋಧನೆ ಮತ್ತು ಬೇಲಿ ಹಾಕುವುದು) ಪೂರ್ಣಗೊಂಡಿವೆ. ಆದರೆ, ನೆಲವನ್ನು ಕೊರೆಯುವ ಕೆಲಸ ಇನ್ನೂ ಪ್ರಾರಂಭವಾಗಿಲ್ಲ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಒಟ್ಟು 65 ಸ್ಥಳಗಳಲ್ಲಿ ಕೆಲಸ ಮಾಡುತ್ತಿದೆ. ಈ ಶೋಧನೆಯಲ್ಲಿ ಪ್ಲಾಟಿನಂ ಗುಂಪಿನ ಲೋಹಗಳು, ಬಾಕ್ಸೈಟ್, ತಾಮ್ರ, ಕೋಬಾಲ್ಟ್, ನಿಕಲ್, ಟಂಗ್ಸ್ಟನ್, ಯುರೇನಿಯಂ, ವಜ್ರ ಮತ್ತು ಅಪರೂಪದ ಭೂಮಿಯ ಅಂಶಗಳು ಸೇರಿದಂತೆ ಹಲವಾರು ಮಹತ್ವದ ಖನಿಜಗಳನ್ನು ಹೊರತೆಗೆಯಲು ಅನ್ವೇಷಿಸಲಾಗುತ್ತಿದೆ.
ಅರಣ್ಯ ಮತ್ತು ಗಣಿಗಾರಿಕೆಯ ನಡುವಿನ ಸಂಘರ್ಷವನ್ನು ಬಗೆಹರಿಸುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ದೊಡ್ಡ ಸವಾಲಾಗಿದೆ. ಈ ಕುರಿತು 2025ರ ನವೆಂಬರ್‌ನಲ್ಲಿ ಎರಡೂ ಸರ್ಕಾರಗಳ ಅಧಿಕಾರಿಗಳ ನಡುವೆ ಚರ್ಚೆಯೂ ನಡೆದಿದೆ.ಈ ಬಗ್ಗೆ ಅಧಿಕಾರಿಗಳ ಮುಂದಿನ ಹೆಜ್ಜೆ ಏನು ಎಂಬುದನ್ನ ಕಾದುನೋಡಬೇಕಿದೆ.
