ಬೆಂಗಳೂರು: ಕರ್ನಾಟಕ ಸರ್ಕಾರವು ಸರ್ಕಾರಿ ಶಾಲೆಗಳ ಪೂರ್ವ ಪ್ರಾಥಮಿಕ ತರಗತಿಗಳಾದ ಎಲ್‌ಕೆಜಿ ಮತ್ತು ಯುಕೆಜಿ (LKG-UKG) ಮಕ್ಕಳಿಗೂ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ (PM POSHAN) ಯೋಜನೆಯಡಿ ಬಿಸಿಯೂಟ (ಮಧ್ಯಾಹ್ನದ ಊಟ) ಒದಗಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಡಿಸೆಂಬರ್ 1, 2025 ರಿಂದಲೇ ಈ ಯೋಜನೆ ಜಾರಿಗೆ ಬರುತ್ತಿದ್ದು, ಈ ಚಿಕ್ಕ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಬಿಸಿಯೂಟದ ಜೊತೆಗೆ ಕ್ಷೀರಭಾಗ್ಯ ಯೋಜನೆಯಡಿ ಹಾಲು, ವಾರಕ್ಕೆ ಎರಡು ಬಾರಿ ಮೊಟ್ಟೆ ಹಾಗೂ ಬಾಳೆಹಣ್ಣು ಕೂಡಾ ನೀಡಲಾಗುವುದು.
ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬಾಲವಾಟಿಕಾ (ಪೂರ್ವ ಪ್ರಾಥಮಿಕ) ತರಗತಿಗಳಿರುವ ಎಲ್ಲಾ ಶಾಲೆಗಳೂ ಈ ಯೋಜನೆಯಡಿ ಬರುತ್ತವೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು 1,98,270 ಮಕ್ಕಳು LKG ಮತ್ತು UKG ತರಗತಿಗಳಲ್ಲಿ ಓದುತ್ತಿದ್ದಾರೆ. ಇವರೆಲ್ಲರಿಗೂ ಮಧ್ಯಾಹ್ನದ ಬಿಸಿಯೂಟ ಒದಗಿಸಲು ಕೇಂದ್ರ ಸರ್ಕಾರವು 2024-25ನೇ ಸಾಲಿನ ವಾರ್ಷಿಕ ಕಾರ್ಯಯೋಜನೆಯಲ್ಲಿ ₹2,215 ಲಕ್ಷ ಅನುದಾನವನ್ನು ಮಂಜೂರು ಮಾಡಿದೆ.
ಈ ಯೋಜನೆಯ ಮೂಲಕ 3 ರಿಂದ 6 ವರ್ಷ ವಯೋಮಾನದ ಮಕ್ಕಳ ಪೌಷ್ಟಿಕಾಂಶ ಮತ್ತು ಆರೋಗ್ಯ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ. ಈಗಾಗಲೇ 1 ರಿಂದ 8ನೇ ತರಗತಿಯವರೆಗೆ ಬಿಸಿಯೂಟ ಜಾರಿಯಲ್ಲಿರುವಾಗ, ಈಗ ಚಿಕ್ಕ ವಯಸ್ಸಿನ ಮಕ್ಕಳನ್ನೂ ಸೇರಿಸಿಕೊಂಡು ಯೋಜನೆಯನ್ನು ಸಂಪೂರ್ಣಗೊಳಿಸಲಾಗುತ್ತಿದೆ. ಇದರಿಂದ ಶಾಲಾ ಪ್ರವೇಶದ ಮೊದಲ ಹಂತದಲ್ಲೇ ಮಕ್ಕಳಲ್ಲಿ ಕೂಡು ಆಹಾರ ಕ್ರಮ ಬೆಳೆಯಲಿದೆ ಎಂದು ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಬಿಸಿಯೂಟ ತಯಾರಿಕೆಗೆ ಅಡುಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಅಡುಗೆ ಸಹಾಯಕರು ಮತ್ತು ಅಡುಗೆಯವರಿಗೆ ಗೌರವ ಧನವನ್ನು ಶಾಲಾ ಆಡಳಿತ ಸಮಿತಿ (SDMC) ಅಥವಾ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಮೂಲಕ ನೀಡಬೇಕೆಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಹಿಂದೆ ಕೆಲವು ಶಾಲೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಬಿಸಿಯೂಟ ತಯಾರಿಕೆಯಲ್ಲಿ ತೊಂದರೆಯಾಗುತ್ತಿತ್ತು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP-2020) ಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ವಿಶೇಷ ಪ್ರಾಶಸ್ತ್ಯ ನೀಡಲಾಗಿದೆ. ಈ ಯೋಜನೆಯೂ ಆ ದಿಶೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಎಂದು ಶಿಕ್ಷಣ ತಜ್ಞರು ತಿಳಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಪೌಷ್ಟಿಕ ಆಹಾರ ಸಿಗುವುದರಿಂದ ಮಕ್ಕಳ ದೈಹಿಕ-ಮಾನಸಿಕ ಬೆಳವಣಿಗೆಗೆ ದೊಡಡ ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.
