ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಮೇ 19ರಂದು ತಮಿಳುನಾಡಿನ ಪ್ರವಾಸಿಗರೊಬ್ಬರು ಮೃತಪಟ್ಟ ಘಟನೆ ಬಳಿಕ ಅರಣ್ಯ ಇಲಾಖೆ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಿದೆ. ಕರ್ನಾಟಕ ಅರಣ್ಯ ಇಲಾಖೆ ರಾಜ್ಯದ ಆನೆ ಶಿಬಿರಗಳು, ಸೆರೆಯಲ್ಲಿರುವ ಆನೆಗಳ ಕೇಂದ್ರಗಳು ಹಾಗೂ ಸಾರ್ವಜನಿಕ ವೀಕ್ಷಣಾ ಸ್ಥಳಗಳಿಗೆ ಮೊದಲ ಬಾರಿಗೆ ಸಮಗ್ರ ’ಕರ್ನಾಟಕ ಆನೆ ಶಿಬಿರ ಸುರಕ್ಷತಾ ಪ್ರೋಟೋಕಾಲ್’ ಜಾರಿಗೆ ತಂದಿದೆ.
ಆನೆಗಳು ಮತ್ತು ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಹೊಸ ನಿಯಮಗಳ ಪ್ರಕಾರ, ಪ್ರವಾಸಿಗರು ಇನ್ನು ಮುಂದೆ ಆನೆಗಳನ್ನು ಮುಟ್ಟುವುದು, ಸ್ನಾನ ಮಾಡಿಸುವುದು ಅಥವಾ ಆಹಾರ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪ್ರವಾಸಿಗರು ಆನೆಗಳನ್ನು ವೀಕ್ಷಿಸುವಾಗ ಕನಿಷ್ಠ 30ಅಡಿ ಅಂತರ ಕಾಯ್ದುಕೊಳ್ಳಬೇಕು. ಆನೆಗಳನ್ನು ವೀಕ್ಷಿಸಲು ಶಿಬಿರಗಳಲ್ಲಿ ವಿಶೇಷವಾಗಿ ಗುರುತಿಸಲಾದ ಹಸಿರು ವಲಯ (Green Zone) ಅಥವಾ ವೀಕ್ಷಣಾ ಗ್ಯಾಲರಿಗಳನ್ನು ಮಾತ್ರ ಬಳಸಬೇಕು.
ಹೊಸ ಪ್ರೋಟೋಕಾಲ್ ಪ್ರಕಾರ, ಎಲ್ಲಾ ಆನೆ ಶಿಬಿರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ಇರಿಸಲಾಗುತ್ತದೆ. ಸಾರ್ವಜನಿಕ ವೀಕ್ಷಣೆಗೆ ಒಂದು ಶಿಬಿರದಲ್ಲಿ ಗರಿಷ್ಠ 10 ಆನೆಗಳನ್ನು ಮಾತ್ರ ಇರಿಸಲು ಅವಕಾಶ ನೀಡಲಾಗಿದೆ.
ಪ್ರವಾಸಿಗರ ಸಂಖ್ಯೆಯನ್ನು ಶಿಬಿರದ ಸಾಮರ್ಥ್ಯ, ಆನೆಗಳ ಸಂಖ್ಯೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ನಿಯಂತ್ರಿಸಲಾಗುತ್ತದೆ. ಒಂದು ವೀಕ್ಷಣಾ ಅವಧಿಯಲ್ಲಿ ಹಸಿರು ವಲಯದಲ್ಲಿ 50 ರಿಂದ 75 ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಆನೆ ವೀಕ್ಷಣೆಗೆ 20 ರಿಂದ 30 ನಿಮಿಷಗಳ ಸಮಯ ನೀಡಲಾಗುತ್ತದೆ. ಕರ್ನಾಟಕದ 10 ಆನೆ ಶಿಬಿರಗಳಲ್ಲಿ ಒಟ್ಟು 114 ಆನೆಗಳಿವೆ. ದುಬಾರೆ, ಹಾರಂಗಿ, ಮತ್ತಿಗೋಡು, ಸಕ್ರೆಬೈಲು ಮತ್ತು ದಾಂಡೇಲಿ ಪನ್ಸೋಲಿ ಪ್ರಮುಖ ಪ್ರವಾಸಿ ವೀಕ್ಷಣಾ ಕೇಂದ್ರಗಳಾಗಿವೆ.
ಮದಾವಸ್ಥೆಯಲ್ಲಿರುವ, ಗಾಯಗೊಂಡ, ಅಸ್ವಸ್ಥ, ಒತ್ತಡದಲ್ಲಿರುವ ಅಥವಾ ಹೊಸದಾಗಿ ಸೆರೆ ಹಿಡಿದ ಆನೆಗಳನ್ನು ಸಾರ್ವಜನಿಕರ ಮುಂದೆ ತರುವಂತಿಲ್ಲ. ಆರು ತಿಂಗಳೊಳಗಿನ ಮರಿಯೊಂದಿಗೆ ಇರುವ ತಾಯಿ ಆನೆಗಳಿಗೂ ಸಾರ್ವಜನಿಕ ವೀಕ್ಷಣೆಯಿಂದ ವಿನಾಯಿತಿ ನೀಡಲಾಗಿದೆ.
ಆನೆ ಶಿಬಿರಗಳಲ್ಲಿ 3 ವಲಯಗಳು
ಕೆಂಪು ವಲಯ (Red Zone): ಆನೆಗಳಿಗೆ ಸ್ನಾನ, ಆಹಾರ, ಟೆಥರಿಂಗ್ ಮತ್ತು ಪಶುವೈದ್ಯಕೀಯ ಚಿಕಿತ್ಸೆ ನೀಡುವ ಪ್ರದೇಶ. ಇಲ್ಲಿ ಮಾವುತರು, ವೈದ್ಯರು ಹಾಗೂ ಸಿಬ್ಬಂದಿಗೆ ಮಾತ್ರ ಪ್ರವೇಶ.
ಕಿತ್ತಳೆ ವಲಯ (Amber Zone): ಸಿಬ್ಬಂದಿ ಓಡಾಟ ಹಾಗೂ ತುರ್ತು ಕಾರ್ಯಾಚರಣೆಗಳಿಗೆ ಮೀಸಲಾದ ನಿಯಂತ್ರಿತ ಮಾರ್ಗ.
ಹಸಿರು ವಲಯ (Green Zone):ಪ್ರವಾಸಿಗರು ಮಾರ್ಗದರ್ಶಕರೊಂದಿಗೆ ನಿಂತು ಆನೆಗಳನ್ನು ವೀಕ್ಷಿಸುವ ಪ್ರದೇಶ. ಇಲ್ಲಿ ಆನೆಗಳನ್ನು ಮುಟ್ಟುವುದು, ಆಹಾರ ನೀಡುವುದು ಅಥವಾ ಸ್ನಾನ ಮಾಡಿಸುವುದು ನಿಷೇಧ.
ನಿಯಮ ಉಲ್ಲಂಘಿಸಿದರೆ ಶಿಬಿರದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳಬಹುದು. ಆನ್‌ಲೈನ್ ಮತ್ತು ಸ್ಥಳದಲ್ಲೇ ಟಿಕೆಟ್ ವ್ಯವಸ್ಥೆ, ಮಕ್ಕಳ, ಹಿರಿಯ ನಾಗರಿಕರ ಹಾಗೂ ವಿಶೇಷ ಅಗತ್ಯವಿರುವ ಪ್ರವಾಸಿಗರ ಸುರಕ್ಷತೆಗೆ ವಿಶೇಷ ಗಮನ ನೀಡಲಾಗುತ್ತದೆ. ಆನೆಗಳ ಕಲ್ಯಾಣ ಮತ್ತು ಪ್ರವಾಸಿಗರ ಸುರಕ್ಷತೆ ಎರಡನ್ನೂ ಸಮತೋಲನಗೊಳಿಸುವ ಉದ್ದೇಶದಿಂದ ಈ ಹೊಸ ನಿಯಮಗಳು ಶೀಘ್ರದಲ್ಲೇ ರಾಜ್ಯದ ಎಲ್ಲಾ ಆನೆ ಶಿಬಿರಗಳಲ್ಲಿ ಜಾರಿಯಾಗಲಿವೆ.
