ಇ-ಸ್ಟ್ಯಾಂಪ್‌ಗೆ ಗುಡ್‌ಬೈ..! ಕರ್ನಾಟಕದಲ್ಲಿ ಸಂಪೂರ್ಣ ಡಿಜಿಟಲ್ ಸ್ಟ್ಯಾಂಪ್‌..!

Untitled design 2025 12 01T194937.253

ಬೆಂಗಳೂರು: ರಾಜ್ಯದಲ್ಲಿ ದಶಕಗಳಿಂದ ನಡೆದುಬಂದಿದ್ದ ಇ-ಸ್ಟ್ಯಾಂಪಿಂಗ್ (ಛಾಪಾ ಕಾಗದ) ವ್ಯವಸ್ಥೆಗೆ ಈಗ ಸಂಪೂರ್ಣ ಡಿಜಿಟಲ್ ರೂಪ ಬಂದಿದೆ. ನಕಲಿ ಮತ್ತು ದುರ್ಬಳಕೆ ತಡೆಗೆ ಈ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಕಳೆದ ಅಕ್ಟೋಬರ್‌ನಿಂದಲೇ ಇದು ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿದೆ. ಕಂದಾಯ ಸಚಿವ ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದಂತೆ, ಹಂತಹಂತವಾಗಿ ಭೌತಿಕ ಇ-ಸ್ಟ್ಯಾಂಪ್‌ಗಳನ್ನು ನಿಲ್ಲಿಸಲಾಗುವುದು ಮತ್ತು ಡಿಜಿಟಲ್ ಸ್ಟ್ಯಾಂಪ್‌ ಕಾಗದಗಳಿಗೆ ಪ್ರಾಮುಖ್ಯತೆ ನೀಡಲಾಗುವುದು.

ಹಳೆಯ ವ್ಯವಸ್ಥೆಯ ಸವಾಲುಗಳು ಹಾಗೂ ಹೊಸ ಡಿಜಿಟಲ್ ಪರಿಹಾರ

ಇದುವರೆಗೆ, ಛಾಪಾ ಕಾಗದಗಳನ್ನು ಕೊಳ್ಳಲು ಜನರು ಅಧಿಕೃತ ಮಾರಾಟ ಸ್ಥಳಗಳಿಗೆ ಭೇಟಿ ನೀಡಬೇಕಾಗಿತ್ತು. ನಕಲಿ ಚಲನ್‌ಗಳ ಬಳಕೆ, ಉಪ ನೋಂದಣಿ ಅಧಿಕಾರಿಗಳಿಂದ ಅನಧಿಕೃತವಾಗಿ ಛಾಪಾ ಕಾಗದ ಪಡೆಯುವ ಸಾಧ್ಯತೆ ಇದೆ. ಜೊತೆಗೆ ಕಾಗದಗಳನ್ನು ಕಳೆದುಕೊಳ್ಳುವ ಅಪಾಯವಿದೆ ಹಾಗೂ ಮಧ್ಯವರ್ತಿಗಳ ಮೇಲಿನ ಅವಲಂಬನೆ, ಇವು ಹಳೆಯ ವ್ಯವಸ್ಥೆಯ ಪ್ರಮುಖ ಸಮಸ್ಯೆಗಳಾಗಿದ್ದವು. ಈ ಎಲ್ಲಾ ಕುಂದುಕೊರತೆಗಳನ್ನು ನಿವಾರಿಸಲು ಡಿಜಿಟಲ್ ಇ-ಸ್ಟ್ಯಾಂಪಿಂಗ್ ವ್ಯವಸ್ಥೆ ರೂಪಿಸಲಾಗಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ ಹೊಸ ವ್ಯವಸ್ಥೆ?

ಈ ಡಿಜಿಟಲ್ ವ್ಯವಸ್ಥೆಯಲ್ಲಿ, ಯಾವುದೇ ಮಧ್ಯವರ್ತಿ ಇಲ್ಲದೆ ನೇರ ಆನ್‌ಲೈನ್‌ ಮೂಲಕ ಛಾಪಾ ಕಾಗದ ಖರೀದಿದಬಹುದು. ಒಬ್ಬರ ಅಗತ್ಯಕ್ಕೆ ತಕ್ಕಂತೆ, ಅಗ್ರಿಮೆಂಟ್ ಮಾಡಿಕೊಳ್ಳುವ ಎಲ್ಲಾ ಪಕ್ಷಗಳು ತಮ್ಮ ಆಧಾರ್ ವಿವರಗಳನ್ನು ನೀಡಿ, OTP ದೃಢೀಕರಣ ಮಾಡಬೇಕು. ಈ ಪ್ರಕ್ರಿಯೆ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಪಾವತಿ ಆನ್‌ಲೈನ್‌ ಮಾಡಿದ ನಂತರ, ಒಂದು ನಂಬರ್ ಮತ್ತು ಕ್ಯೂಆರ್ ಕೋಡ್ ಹೊಂದಿರುವ ಡಿಜಿಟಲ್ ಛಾಪಾ ದಾಖಲೆ (ಎಸ್ಆರ್ಎನ್) ಉತ್ಪನ್ಮಾಗುತ್ತದೆ. ಈ ದಾಖಲೆಯನ್ನು ಭವಿಷ್ಯದಲ್ಲಿ ಯಾವುದೇ ಸಮಯದಲ್ಲಿ ಪ್ರಿಂಟ್ ಮಾಡಿಕೊಳ್ಳಬಹುದು ಮತ್ತು ಅದು ಕಾನೂನುಬದ್ಧವಾಗಿ ಮಾನ್ಯತೆ ಪಡೆದಿರುತ್ತದೆ.

ಕಾನೂನು ಸೌಕರ್ಯ ಮತ್ತು ಹೆಚ್ಚುವರಿ ಅನುಕೂಲಗಳು

ಈ ಹಿಂದೆ, ನೋಂದಣಿಯಾಗದ ಒಪ್ಪಂದಗಳಿಗೆ (ಅನ್-ರಿಜಿಸ್ಟರ್ಡ್ ಅಗ್ರಿಮೆಂಟ್ಸ್) ಸ್ಟ್ಯಾಂಪ್‌ ಗದ ಅನ್ವಯಿಸುತ್ತಿರಲಿಲ್ಲ. ಹೊಸ ಡಿಜಿಟಲ್ ವ್ಯವಸ್ಥೆಯಲ್ಲಿ ಎಲ್ಲಾ ರೀತಿಯ ಒಪ್ಪಂದಗಳಿಗೂ ಇದನ್ನು ಬಳಸಲು ಅನುಕೂಲವಿದೆ. ಇದಕ್ಕೆ ಕಾನೂನು ಮಾನ್ಯತೆ ನೀಡಲು, ‘ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕ-2025’ ಜಾರಿಗೆ ಬಂದಿದೆ. ಈ ಕಾಯ್ದೆಯು ಡಿಜಿಟಲ್ ಸಹಿಗಳು ಮತ್ತು ದಾಖಲೆಗಳಿಗೆ ಸಂಪೂರ್ಣ ಕಾನೂನು ಬಲ ನೀಡುತ್ತದೆ. ಇದರಿಂದ, ಕಾಗದದ ದಾಖಲೆಗಳು ನಷ್ಟವಾದರೆ ಉಂಟಾಗುವ ತೊಂದರೆಗಳಿಂದ ಸಂಪೂರ್ಣವಾಗಿ ಮುಕ್ತಿ ದೊರೆತಿದೆ.

ಸಚಿವ ಕೃಷ್ಣಬೈರೇಗೌಡರು ತಿಳಿಸಿದಂತೆ, ಮನೆಯಲ್ಲಿ ಕೂತೇ ಈಗ ಛಾಪಾ ಕಾಗದ ಖರೀದಿ ಮಾಡಬಹುದು. ಇದು ಪೂರ್ತಿ ಆನ್‌ಲೈನ್‌ ಮತ್ತು ಭದ್ರತಾ ವ್ಯವಸ್ಥೆಯಲ್ಲಿರುತ್ತದೆ. ಈ ಹಿಂದೆ ಕಳೆದುಹೋದರೆ ದಾಖಲೆ ಇರುತ್ತಿರಲಿಲ್ಲ, ಆದರೆ ಈಗ ಒಮ್ಮೆ ಒಪ್ಪಂದ ಮಾಡಿಕೊಂಡರೆ ಡಿಜಿಟಲ್ ದಾಖಲೆ ಶಾಶ್ವತವಾಗಿ ಭದ್ರವಾಗಿರುತ್ತದೆ.

ಸರ್ಕಾರದ ಉದ್ದೇಶ, ಈ ಡಿಜಿಟಲ್ ವ್ಯವಸ್ಥೆಯನ್ನು ಸರ್ವೇಸಾಮಾನ್ಯರಿಗೆ ಸುಲಭ ಮಾಡುವುದು. ಶುಲ್ಕದ ರಚನೆಯನ್ನು ಹೆಚ್ಚಿಸದೆ, ಸೇವೆಯ ಗುಣಮಟ್ಟವನ್ನು ವರ್ಧಿಸುವುದೇ ಗುರಿ. ಸರ್ಕಾರಿ ಆದಾಯದ ಸುರಕ್ಷತೆ, ಪಾರದರ್ಶಕತೆ ಮತ್ತು ಸಾರ್ವಜನಿಕರ ಅನುಕೂಲ ಈ ಮೂರು ಅಂಶಗಳನ್ನು ಈ ಹೊಸ ಡಿಜಿಟಲ್ ಇ-ಸ್ಟ್ಯಾಂಪಿಂಗ್ ವ್ಯವಸ್ಥೆ ಖಾತರಿಪಡಿಸಲಿದೆ. ಇದು ಕರ್ನಾಟಕದ ‘ಡಿಜಿಟಲ್ ಇಂಡಿಯಾ’ ಪಯಣದಲ್ಲಿನ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

Exit mobile version