ವಿಧಾನಸೌಧದಲ್ಲಿ ಜಂಟಿ ಅಧಿವೇಶನ: ರಾಜ್ಯಪಾಲರ ಭಾಷಣಕ್ಕೆ ಕೌಂಟ್ ಡೌನ್

Untitled design 2026 01 22T105804.402

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ತಿಕ್ಕಾಟದ ನಡುವೆಯೇ, ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಒಪ್ಪಿಗೆ ಸೂಚಿಸಿದ್ದು, ಈಗ ಇಡೀ ರಾಜ್ಯದ ಗಮನ ವಿಧಾನಸೌಧದತ್ತ ಇದೆ.

ರಾಜ್ಯಪಾಲರು ನಿಗದಿತ ಸಮಯಕ್ಕೆ ಅಧಿವೇಶನಕ್ಕೆ ಆಗಮಿಸಲಿದ್ದು, ಈ ಕುರಿತು ರಾಜಭವನದಿಂದ (ಲೋಕಭವನ) ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಮಾಹಿತಿ ರವಾನೆಯಾಗಿದೆ. ರಾಜ್ಯಪಾಲರ ಸ್ವಾಗತಕ್ಕಾಗಿ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾರ್ಷಲ್‌ಗಳ ಬಿಗಿ ಭದ್ರತೆಯೊಂದಿಗೆ ರಾಜ್ಯಪಾಲರನ್ನು ಸದನದೊಳಗೆ ಬರಮಾಡಿಕೊಳ್ಳಲು ಸಿಬ್ಬಂದಿಗಳು ಸಜ್ಜಾಗಿದ್ದಾರೆ. ಈಗಾಗಲೇ ಭಾಷಣದ ಪ್ರತಿಗಳನ್ನು ಅಧಿಕಾರಿಗಳು ವಿಶೇಷ ವಾಹನದಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್‌ಗೆ ತಲುಪಿಸಿದ್ದಾರೆ.

ಈ ಬಾರಿಯ ಅಧಿವೇಶನದಲ್ಲಿ ಅತಿ ದೊಡ್ಡ ಕುತೂಹಲವಿರುವುದು ರಾಜ್ಯಪಾಲರ ಭಾಷಣದ ಪಠ್ಯದ ಮೇಲೆ. ಸರ್ಕಾರ ಸಿದ್ಧಪಡಿಸಿದ್ದ ಭಾಷಣದ ಪ್ರತಿಯಲ್ಲಿದ್ದ 11 ಪ್ರಮುಖ ಪ್ಯಾರಾಗಳನ್ನು ಕೈಬಿಡುವಂತೆ ರಾಜಭವನ ಸೂಚನೆ ನೀಡಿತ್ತು ಎನ್ನಲಾಗಿದೆ. ಆದರೆ, ಸರ್ಕಾರ ಕೇವಲ 2 ಅಂಶಗಳನ್ನು ಮಾತ್ರ ತೆಗೆದುಹಾಕಿ ಭಾಷಣದ ಪ್ರತಿಯನ್ನು ತಯಾರಿಸಿದೆ ಎಂದು ತಿಳಿದುಬಂದಿದೆ. ಹೀಗಾಗಿ ರಾಜ್ಯಪಾಲರು ಆ 11 ಪ್ಯಾರಾಗಳನ್ನು ಓದುತ್ತಾರೋ ಅಥವಾ ಅವುಗಳನ್ನು ಬದಿಗಿಟ್ಟು ಕೇವಲ ಔಪಚಾರಿಕ ಭಾಷಣ ಮಾಡುತ್ತಾರೋ ಎಂಬುದು ಇನ್ನೂ ನಿಗೂಢವಾಗಿದೆ.

ಸದನದಲ್ಲಿ ಹೈಡ್ರಾಮಾ ಸಾಧ್ಯತೆ

ಬೆಳಿಗ್ಗೆ 11 ಗಂಟೆಗೆ ರಾಜ್ಯಪಾಲರ ಭಾಷಣ ಆರಂಭವಾಗಲಿದ್ದು, ಈ ವೇಳೆ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದ ನಡುವೆ ಭಾಷಣದ ವಿಚಾರವಾಗಿ ವಾಗ್ವಾದ ನಡೆಯುವ ಸಾಧ್ಯತೆಯಿದೆ. ಒಂದು ವೇಳೆ ರಾಜ್ಯಪಾಲರು ಸರ್ಕಾರದ ಆಯ್ದ ಭಾಗಗಳನ್ನು ಮಾತ್ರ ಓದಿ, ಪೂರ್ಣ ಭಾಷಣದ ಪ್ರತಿಯನ್ನು ಸದನದ ಮೇಜಿನ ಮೇಲಿಟ್ಟು ಹೊರನಡೆದರೆ ರಾಜ್ಯ ಸರ್ಕಾರಕ್ಕೆ ಮುಜುಗರಕ್ಕೀಡು ಮಾಡುತ್ತದೆ ಹಾಗೂ ಸದನದಲ್ಲಿ ಭಾರಿ ಹೈಡ್ರಾಮವಾಗುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ, ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಈ ಶೀತಲ ಸಮರವು ಜಂಟಿ ಅಧಿವೇಶನದ ಭಾಷಣದ ಮೂಲಕ ಸ್ಫೋಟಗೊಳ್ಳುತ್ತದೆಯೇ ಅಥವಾ ಅಧಿವೇಶ ಯಾವುದೇ ಗೊಂದಲವಿಲ್ಲದೇ ಮುಕ್ತಾಯವಾಗುತ್ತದೆಯೇ ಎಂಬ ಕೌತುಕಕ್ಕೆ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.

Exit mobile version