ಬಸ್ ಸಂಚಾರ ಸ್ಥಗಿತ! ಕಲಬುರ್ಗಿ ಹಸಿ ಬರ ಘೋಷಣೆಗಾಗಿ ರೈತರ ಪ್ರತಿಭಟನೆ

Untitled design (67)

ಕಲಬುರಗಿ: ಜಿಲ್ಲೆಯನ್ನು ಹಸಿ ಬರ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ರೈತ ಸಂಘಗಳೂ ಇಂದು (ಅ.13) ಬಂದ್‌ಗೆ ಕರೆಕೊಟ್ಟಿವೆ.ಪ್ರವಾಹ ಮತ್ತು ಅನಿಯಮಿತ ಮಳೆಯಿಂದಾಗಿ ಜಿಲ್ಲೆಯ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ.

ಬೆಳಗ್ಗೆ ಕೇಂದ್ರ ಬಸ್ ನಿಲ್ದಾಣದ ಬಳಿ ನೂರಾರು ರೈತರು ಮತ್ತು ಹೋರಾಟಗಾರರು ಸೇರಿ ಭಾರೀ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಿಂದ ಕಲಬುರಗಿಯಿಂದ ರಾಜ್ಯದ ಇತರೆ ಭಾಗಗಳಿಗೆ ಹೋಗುವ ಮತ್ತು ಬರುವ ಎಲ್ಲಾ ಬಸ್ ಸಂಚಾರಗಳು ಸ್ಥಗಿತಗೊಂಡಿವೆ. ಪ್ರತಿಭಟನೆ ನಡೆಸುತ್ತಿರುವ ರೈತರು, ಸರ್ಕಾರವು ತಕ್ಷಣ ಜಿಲ್ಲೆಗೆ ಹಸಿ ಬರ ಘೋಷಣೆ ಮಾಡದಿದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

ರೈತ ಸಂಘಟನೆಗಳ ಜೊತೆಗೆ, ಸಾರಿಗೆ ಮತ್ತು ವಾಣಿಜ್ಯ ಸಂಘಗಳು ಸೇರಿದಂತೆ 15 ಕ್ಕೂ ಹೆಚ್ಚು ಸಂಘಟನೆಗಳು ಈ ಬಂದ್‌ಗೆ ಬೆಂಬಲವನ್ನು ನೀಡಿವೆ. ಪ್ರತಿಭಟನೆಯ ನೇತೃತ್ವ ವಹಿಸಿರುವ ರೈತ ಸಂಘದ ಮುಖ್ಯಸ್ಥ ತಿಮ್ಮಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 60% ಕ್ಕೂ ಹೆಚ್ಚು ಪ್ರದೇಶ ಪ್ರವಾಹ ಮತ್ತು ಅತಿವೃಷ್ಟಿಯಿಂದ ಬಹಳಷ್ಟು ನಷ್ಟವನ್ನು ಅನುಭವಿಸಿದೆ. ಆದರೂ ಸರ್ಕಾರವು ಇದುವರೆಗೂ ಹಸಿ ಬರ ಘೋಷಣೆ ಮಾಡಿಲ್ಲ. ಇದು ರೈತರ ಜೊತೆಗಿನ ಅನ್ಯಾಯ ಎಂದರು

ಬೆಳಗ್ಗೆ 9 ಗಂಟೆಗೆ ಜಗತ್ ವೃತ್ತದಲ್ಲಿ ಮಹಾಪ್ರತಿಭಟನೆ ನಡೆಸಲಾಗಿದೆ. ಈ ನಡುವೆ, ಮಧ್ಯಾಹ್ನ 1 ಗಂಟೆಯ ನಂತರ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಮನವಿ ಸಲ್ಲಿಸಲಾಗುವುದು ಎಂದು ಸಂಘಟನೆಯ ರೈತರು ತಿಳಿಸಿದ್ದಾರೆ.ಇದೇ ವೇಳೆ ರೈತ  ನೇತಾರ ಶರಣಪ್ಪ ಮಾಲಿ ಮಾತನಾಡಿ,ನಾವು ಶಾಂತಿಯುತವಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ. ಸರ್ಕಾರವು ನಮ್ಮ ಕಷ್ಟಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ತಕ್ಷಣ ಹಸಿ ಬರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

Exit mobile version