ವೆನ್ನಿಲಾ ಕೊಲೆ ಪ್ರಕರಣ: ಪ್ರಿಯಾಂಕಾಳ ಪಾಲಿಗ್ರಾಫ್ ಟೆಸ್ಟ್‌ ಗೆ ಸಿದ್ಧತೆ

Untitled design (16)

ಕಾಡುಗೋಡಿ ಬಾಲಕಿ ವೆನ್ನಿಲಾ ಕೊಲೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಪ್ರಕರಣದ ನೈಜ ಸತ್ಯಾಂಶವನ್ನು ಹೊರತೆಗೆದಲು ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಈಗಾಗಲೇ ಬಂಧಿತರಾಗಿರುವ ಆರೋಪಿಗಳಾದ ಮೋಹನ್ ಮತ್ತು ಪ್ರಿಯಾಂಕಾರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆಹಾಕಲು ವಿಶೇಷ ತನಿಖಾ ತಂಡ ಕಾರ್ಯಾಚರಣೆ ಮುಂದುವರಿಸಿದೆ.

ಬಾಣಸವಾಡಿ ಎಸಿಪಿ ಅನುಷಾ ನೇತೃತ್ವದ ವಿಶೇಷ ತನಿಖಾ ತಂಡ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆ ಹಾಗೂ ಸಾಕ್ಷ್ಯ ಸಂಗ್ರಹಕ್ಕಾಗಿ ಪೊಲೀಸ್ ಕಸ್ಟಡಿ ನೀಡುವಂತೆ ಮನವಿ ಮಾಡಿತ್ತು. ಮನವಿಯನ್ನು ಪರಿಶೀಲಿಸಿದ ಒಂದನೇ ಎಸಿಜೆಎಂ ನ್ಯಾಯಾಲಯ, ಆರೋಪಿ ಮೋಹನ್‌ಗೆ 5 ದಿನ ಹಾಗೂ ಪ್ರಿಯಾಂಕಾಗೆ 10 ದಿನಗಳ ಪೊಲೀಸ್ ಕಸ್ಟಡಿಯನ್ನು ಮಂಜೂರು ಮಾಡಿದೆ.

ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿ ಆರೋಪಿ ಮೋಹನ್ ಕೊಲೆ ಸಂಬಂಧ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ. ಮಾರ್ಚ್ 24ರಂದು ಇಂದಿರಾನಗರದಲ್ಲಿ ಶಾಪಿಂಗ್ ವೇಳೆ ವೆನ್ನಿಲಾ ಐಸ್‌ಕ್ರೀಂ ಬೇಕೆಂದು ಅಳುತ್ತಿದ್ದಳು. ಇದರಿಂದ ಕೋಪಗೊಂಡು ಬಾಲಕಿಯ ಹೊಟ್ಟೆಗೆ ಒದ್ದು, ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಆತ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆದರೆ ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ತಾಯಿ ಪ್ರಿಯಾಂಕಾ ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾಳೆ. ತನ್ನ ಮಗಳ ಕೊಲೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿರುವ ಆಕೆ, ತಾನು ನಿರಪರಾಧಿ ಎಂದು ವಾದಿಸುತ್ತಿದ್ದಾಳೆ. ಇದೇ ವೇಳೆ ಮೋಹನ್ ನೀಡಿರುವ ಹೇಳಿಕೆ ಹಾಗೂ ಪ್ರಿಯಾಂಕಾ ನೀಡಿರುವ ಮಾಹಿತಿಗಳ ನಡುವೆ ವ್ಯತ್ಯಾಸ ಕಂಡುಬಂದಿರುವುದು ತನಿಖಾಧಿಕಾರಿಗಳ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ವೈಜ್ಞಾನಿಕ ತನಿಖೆಯ ಮೊರೆ ಹೋಗಿದ್ದು, ಪ್ರಿಯಾಂಕಾಗೆ ಪಾಲಿಗ್ರಾಫ್ ಪರೀಕ್ಷೆ (ಸುಳ್ಳುಪತ್ತೆ ಪರೀಕ್ಷೆ) ನಡೆಸಲು ಸಿದ್ಧತೆ ಆರಂಭಿಸಿದ್ದಾರೆ. ಈ ಪರೀಕ್ಷೆಗೆ ಪ್ರಿಯಾಂಕಾ ಸಮ್ಮತಿ ನೀಡಿರುವುದಾಗಿ ತಿಳಿದುಬಂದಿದ್ದು, ಅಗತ್ಯ ಕಾನೂನು ಮತ್ತು ನ್ಯಾಯಾಲಯದ ಅನುಮತಿ ಪಡೆಯುವ ಪ್ರಕ್ರಿಯೆಗಳು ಈಗಾಗಲೇ ಆರಂಭಗೊಂಡಿವೆ.

ಪಾಲಿಗ್ರಾಫ್ ಪರೀಕ್ಷೆಯ ಫಲಿತಾಂಶ, ಮೊಬೈಲ್ ಫೊರೆನ್ಸಿಕ್ ವರದಿಗಳು ಹಾಗೂ ಮುಂದಿನ ವಿಚಾರಣೆಗಳ ಆಧಾರದ ಮೇಲೆ ಪ್ರಕರಣದ ನಿಜಾಂಶಗಳು ಬಹಿರಂಗವಾಗುವ ನಿರೀಕ್ಷೆಯಿದೆ. ರಾಜ್ಯದ ಗಮನ ಸೆಳೆದಿರುವ ಈ ಪ್ರಕರಣದಲ್ಲಿ ತನಿಖೆಯ ಮುಂದಿನ ಹಂತಗಳು ಮಹತ್ವ ಪಡೆದುಕೊಂಡಿವೆ. 

Exit mobile version