ಬೆಂಗಳೂರಿನ ಇಸ್ಕಾನ್ ದೇವಾಲಯಗಳಲ್ಲಿ ಇಂದಿನಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

Shriram Nene Madhuri Dixit

ಬೆಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಬೆಂಗಳೂರಿನ ಇಸ್ಕಾನ್ ದೇವಾಲಯಗಳಲ್ಲಿ ಭರ್ಜರಿ ಸಿದ್ಧತೆಗಳು ನಡೆದಿದ್ದು, ಸೆಪ್ಟೆಂಬರ್ 3ರಿಂದ 5ರವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಗರದ ಪ್ರಮುಖ ಇಸ್ಕಾನ್ ದೇವಾಲಯಗಳಲ್ಲಿ ಭಕ್ತರಿಗೆ ವಿಶೇಷ ದರ್ಶನ, ಪೂಜೆ, ಸೇವೆ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಉತ್ಸವದ ಅಂಗವಾಗಿ ಮಹಾ ಅಭಿಷೇಕ, ಮಹಾಮಂಗಳಾರತಿ, 56 ಬಗೆಯ ಖಾದ್ಯಗಳ ಚಪ್ಪನ್ ಭೋಗ್, ಮಖನ್ ಮಿಶ್ರಿ (ಬೆಣ್ಣೆ-ಸಕ್ಕರೆ) ನೈವೇದ್ಯ, ಪುಷ್ಪಾಂಜಲಿ ಸೇವೆ, ಪಲ್ಲಕ್ಕಿ ಉತ್ಸವ ಮತ್ತು ಜುಲನ್ ಸೇವೆ ನಡೆಯಲಿದೆ. ಇದರೊಂದಿಗೆ ಗೋ ಪೂಜೆ, ಕೋಟಿ ಜಪ ಯಜ್ಞ ಹಾಗೂ ಭಗವದ್ಗೀತಾ ಪಾರಾಯಣ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಜನ್ಮಾಷ್ಟಮಿ ಸಂಭ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಲು ಖ್ಯಾತ ಕಲಾವಿದರಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಕ್ಕಳಿಂದ ಶ್ಲೋಕ ಪಠಣವೂ ನಡೆಯಲಿದೆ. ಪುಟ್ಟ ಮಕ್ಕಳನ್ನು ರಾಧಾ-ಕೃಷ್ಣರ ವೇಷದಲ್ಲಿ ಸಜ್ಜುಗೊಳಿಸಿ ಭಾಗವಹಿಸಲು ಪೋಷಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಇದಕ್ಕಾಗಿ ಆನ್‌ಲೈನ್ ವೇಷಭೂಷಣ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ.

ಇಸ್ಕಾನ್ ಸಂಸ್ಥಾಪಕ-ಆಚಾರ್ಯ ಶ್ರೀಲ ಪ್ರಭುಪಾದರ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ವಿಶೇಷ ಪ್ರದರ್ಶನ ಕೂಡ ಭಕ್ತರ ಗಮನ ಸೆಳೆಯಲಿದೆ. ಉತ್ಸವಕ್ಕೆ ಆಗಮಿಸುವ ಭಕ್ತರಿಗೆ ನಿರಂತರವಾಗಿ ಅನ್ನಪ್ರಸಾದ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.

‘ಸ್ವಾಗತಂ ಕೃಷ್ಣ’ ನೇರಪ್ರಸಾರ

ಮನೆಯಲ್ಲೇ ಕುಳಿತು ಜನ್ಮಾಷ್ಟಮಿ ಸಂಭ್ರಮದಲ್ಲಿ ಭಾಗಿಯಾಗಲು ಬಯಸುವ ಭಕ್ತರಿಗಾಗಿ ಸೆಪ್ಟೆಂಬರ್ 4ರಂದು ರಾತ್ರಿ 8 ಗಂಟೆಗೆ ‘ಸ್ವಾಗತಂ ಕೃಷ್ಣ’ ಎಂಬ ವಿಶೇಷ ಡಿಜಿಟಲ್ ಕಾರ್ಯಕ್ರಮ ನೇರಪ್ರಸಾರವಾಗಲಿದೆ. ಭಕ್ತಿ ಸಂಗೀತ, ಪ್ರವಚನ, ವಿಶೇಷ ಅಭಿಷೇಕ ಹಾಗೂ ಲೈವ್ ಕ್ವಿಜ್ ಸೇರಿದಂತೆ ಹಲವು ಕಾರ್ಯಕ್ರಮಗಳು ಇದರಲ್ಲಿರಲಿವೆ. ಕ್ವಿಜ್‌ನಲ್ಲಿ ಭಾಗವಹಿಸುವ ವೀಕ್ಷಕರಿಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವೂ ಇರಲಿದೆ.

ಕೆಟಿಪಿಒದಲ್ಲಿ 5,253 ಖಾದ್ಯಗಳ ನೈವೇದ್ಯ

ವೈಟ್‌ಫೀಲ್ಡ್‌ನ ಕೆಟಿಪಿಒ ಆವರಣದಲ್ಲಿ ನಡೆಯುವ ಜನ್ಮಾಷ್ಟಮಿ ಉತ್ಸವ ಮತ್ತೊಂದು ವಿಶೇಷತೆಗೆ ಸಾಕ್ಷಿಯಾಗಲಿದೆ. ‘ನಿಮ್ಮ ಅಡುಗೆಮನೆಯಿಂದ ಕೃಷ್ಣನಿಗೆ ಪ್ರೀತಿಯಿಂದ’ ಅಭಿಯಾನದಡಿ ಭಕ್ತರಿಂದ ಸಂಗ್ರಹಿಸಲಾದ ಬರೋಬ್ಬರಿ 5,253 ಬಗೆಯ ಆಹಾರ ಪದಾರ್ಥಗಳನ್ನು ಶ್ರೀಕೃಷ್ಣನಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ.

ಯುವ ಸಮುದಾಯವನ್ನು ಆಕರ್ಷಿಸುವ ಉದ್ದೇಶದಿಂದ ಯುವ ಬ್ಯಾಂಡ್‌ಗಳಿಂದ ‘ಕೃಷ್ಣ ಜಾಮ್‌ಫೆಸ್ಟ್’ ಮತ್ತು ಭಜನ್ ಜಾಮಿಂಗ್ ಕಾರ್ಯಕ್ರಮಗಳು ನಡೆಯಲಿವೆ. ಅಂತಾರಾಷ್ಟ್ರೀಯ ಖ್ಯಾತಿಯ ಪ್ರಶಸ್ತಿ ಪುರಸ್ಕೃತ ಕಲಾವಿದ ಅಬ್ಬಿ ವಿ ಅವರ ವಿಶೇಷ ಭಕ್ತಿ ಸಂಗೀತ ಕಾರ್ಯಕ್ರಮವೂ ಆಯೋಜಿಸಲಾಗಿದೆ.

ಪ್ರಮುಖ ಸ್ಥಳಗಳ ದರ್ಶನ ಸಮಯ

ಇಸ್ಕಾನ್ ಹರೇ ಕೃಷ್ಣ ಹಿಲ್, ಕಾರ್ಡ್‌ ರಸ್ತೆ, ರಾಜಾಜಿನಗರ:
ಸೆ.3ರಂದು ಬೆಳಿಗ್ಗೆ 8ರಿಂದ ರಾತ್ರಿ 10ರವರೆಗೆ, ಸೆ.4ರಂದು ಬೆಳಿಗ್ಗೆ 8ರಿಂದ ಮಧ್ಯರಾತ್ರಿ 12ರವರೆಗೆ.

ಇಸ್ಕಾನ್ ವೈಕುಂಠ ಹಿಲ್, ಕನಕಪುರ ರಸ್ತೆ, ವಸಂತಪುರ:
ಸೆ.3ರಂದು ಬೆಳಿಗ್ಗೆ 8ರಿಂದ ರಾತ್ರಿ 10ರವರೆಗೆ, ಸೆ.4ರಂದು ಬೆಳಿಗ್ಗೆ 8ರಿಂದ ಮಧ್ಯರಾತ್ರಿ 12ರವರೆಗೆ.

ಇಸ್ಕಾನ್ ಹರೇ ಕೃಷ್ಣ ಫೀಲ್ಡ್ಸ್, ಕೆಟಿಪಿಒ, ವೈಟ್‌ಫೀಲ್ಡ್:
ಸೆ.4ರಂದು ಬೆಳಿಗ್ಗೆ 8ರಿಂದ ಮಧ್ಯರಾತ್ರಿ 12ರವರೆಗೆ ಹಾಗೂ ಸೆ.5ರಂದು ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ.

ಐವಿ ರೊಸ್ಸಾ ರೆಸಾರ್ಟ್ ಗ್ರೌಂಡ್, ಸರ್ಜಾಪುರ ರಸ್ತೆ:
ಸೆ.4ರಂದು ಬೆಳಿಗ್ಗೆ 7ರಿಂದ ಮಧ್ಯರಾತ್ರಿ 12ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿದೆ.

ಹೀಗಾಗಿ ಬೆಂಗಳೂರಿನಲ್ಲಿ ಈ ಬಾರಿ ಕೃಷ್ಣ ಜನ್ಮಾಷ್ಟಮಿ ಧಾರ್ಮಿಕ ಆಚರಣೆಗಳ ಜೊತೆಗೆ ಸಂಗೀತ, ನೃತ್ಯ, ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದೆ.

Exit mobile version