ಕೇರಳಿಗರ ಬಗ್ಗೆ ನನಗೆ ಗೌರವವಿದೆ, ಬಿಜೆಪಿ ನಾಯಕರು ಹುಳಿ ಹಿಂಡುವುದು ಬೇಡ: ಡಿ.ಕೆ.ಶಿವಕುಮಾರ್‌

Untitled design 2025 12 30T185918.953

ಬೆಂಗಳೂರು: ನಾನು ಕೇರಳ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಆಡಳಿತಾತ್ಮಕ ಹಸ್ತಕ್ಷೇಪದ ಬಗ್ಗೆ ಮಾತನಾಡಿದ್ದೇನೆಯೇ ಹೊರತು, ಕೇರಳದ ಜನರ ಬಗ್ಗೆ ಅಲ್ಲ. ನನ್ನ ಹೇಳಿಕೆಯನ್ನು ತಿರುಚಿ ಬಿಜೆಪಿಯ ರಾಜೀವ್ ಚಂದ್ರಶೇಖರ್ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ವಿವಾದ ಹಾಗೂ ರಾಜ್ಯದ ಅಭಿವೃದ್ಧಿ ಕೆಲಸಗಳ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡರು.

ಬಿಜೆಪಿ ನಾಯಕರ ಟೀಕೆಗಳಿಗೆ ಉತ್ತರಿಸಿದ ಶಿವಕುಮಾರ್, ಕೇರಳದ ಜನರೊಂದಿಗೆ ನನಗೆ ಅವಿನಾಭಾವ ಸಂಬಂಧವಿದೆ. ಅವರು ನನ್ನನ್ನು ಪ್ರೀತಿಸುತ್ತಾರೆ, ನನಗೂ ಅವರ ಮೇಲೆ ಅಪಾರ ಗೌರವವಿದೆ. ಅಲ್ಲಿನ ಚುನಾವಣಾ ಪ್ರಚಾರಕ್ಕೂ ನಾನು ಹೋಗಲಿದ್ದೇನೆ. ನಮ್ಮ ಪಕ್ಷದ ನಾಯಕರು ನೀಡಿದ ಸಲಹೆಗಳನ್ನು ನಾವು ಸ್ವೀಕರಿಸುತ್ತೇವೆ. ಆದರೆ ಬಿಜೆಪಿಯವರು ಈ ವಿಚಾರದಲ್ಲಿ ಅನಗತ್ಯವಾಗಿ ಹುಳಿ ಹಿಂಡುವ ಕೆಲಸ ಮಾಡಬಾರದು ಎಂದು ಬಿಜೆಪಿಗರಿಗೆ ಟಾಂಗ್‌ ನೀಡಿದ್ದಾರೆ.

ನೀರಾವರಿ ನಿಗಮಗಳ ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯದ ಜಲಸಂಪನ್ಮೂಲ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು. ಕರ್ನಾಟಕ ನೀರಾವರಿ ನಿಗಮ ಹಾಗೂ ಕೃಷ್ಣ ಭಾಗ್ಯ ಜಲ ನಿಗಮದ ವತಿಯಿಂದ ಸುಮಾರು 5 ಸಾವಿರ ಕೋಟಿ ರೂಪಾಯಿ ಮೊತ್ತದ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ. ಮುಖ್ಯವಾಗಿ ಕೃಷ್ಣಾ ಮೇಲ್ದಂಡೆ ಯೋಜನೆ (UKP) ಅಡಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದಕ್ಕೆ ಒಟ್ಟು 70 ಸಾವಿರ ಕೋಟಿ ರೂಪಾಯಿಗಳ ಅಗತ್ಯವಿದ್ದು, ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

2026ರ ಹೊಸ ವರ್ಷದ ಗುರಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡುವುದೇ ನಮ್ಮ ಮೊದಲ ಆದ್ಯತೆ. ಈ ವರ್ಷದಂತೆ ಮುಂದಿನ ವರ್ಷವೂ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಎಂಬುದು ನನ್ನ ಆಶಯ. ನಮ್ಮ ಗ್ಯಾರಂಟಿ ಯೋಜನೆಗಳು ಎಂದಿನಂತೆ ಮುಂದುವರಿಯಲಿವೆ ಎಂದರು.

ಇದೇ ವೇಳೆ ತಮ್ಮ ನೇತೃತ್ವದ ಆಡಳಿತದ ಬಗ್ಗೆ ಕೇಳಲಾದ ಪ್ರಶ್ನೆಗೆ ಚತುರತೆಯಿಂದ ಉತ್ತರಿಸಿದ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಸರ್ಕಾರದ ಆಡಳಿತ ಮುಂದಿನ ಎರಡೂವರೆ ವರ್ಷಗಳ ಕಾಲ ಸುಭದ್ರವಾಗಿ ಮುಂದುವರಿಯಲಿದೆ. ನನ್ನ ನೇತೃತ್ವದ ಬಗ್ಗೆ ಏನು ನಿರೀಕ್ಷಿಸಬಹುದು ಎಂಬುದಕ್ಕೆ ನಾನು 2026ರಲ್ಲೇ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.

Exit mobile version