ಬೆಂಗಳೂರು: ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ. ಗಿರಿನಗರದ ನಿವಾಸಿ ಹಾಗೂ ಬ್ಯಾಂಕ್ ಉದ್ಯೋಗಿಯಾಗಿದ್ದ ಗಗನ್ ರಾವ್ (ವಯಸ್ಸು 32) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಗನ್ ರಾವ್ ಅವರು ಖಾಸಗಿ ಬ್ಯಾಂಕ್‌ನಲ್ಲಿ ಅಧಿಕಾರಿ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು ಎಂಟು ತಿಂಗಳ ಹಿಂದೆ ಅವರು ಮೇಘನ ಜಾದವ್ ಎಂಬ ಯುವತಿಯನ್ನು ವಿವಾಹವಾಗಿದ್ದರು. ಆರಂಭದಲ್ಲಿ ಅವರ ದಾಂಪತ್ಯ ಜೀವನದಲ್ಲಿ ಎಲ್ಲಾ ಚೆನ್ನಾಗಿತ್ತು. ಆದರೆ ಕೆಲ ತಿಂಗಳುಗಳ ನಂತರ ಪತಿ-ಪತ್ನಿಯ ನಡುವೆ ಸಣ್ಣಸಣ್ಣ ವಿಷಯಕ್ಕೂ ಆಗಾಗೇ ಜಗಳ ನಡೆಯುತ್ತಿತ್ತು.
ಕಳೆದ ರಾತ್ರಿ ಇಬ್ಬರ ನಡುವೆ ಜಗಳ ನಡೆದಿದೆ. ನಂತರ ಮನನೊಂದ ಗಗನ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಬಾಗಿಲು ತೆರೆಯದ ಇದ್ದ ಕಾರಣ ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ಒಡೆದು ಒಳಗೆ ಹೋದಾಗ, ಗಗನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಮೃತನ ತಂಗಿ ದೂರು ದಾಖಲಿಸಿದ್ದಾರೆ. ತಕ್ಷಣವೇ ಘಟನೆಯ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದು, ಗಿರಿನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಶವವನ್ನು ವಶಕ್ಕೆ ಪಡೆದು ಪೋಸ್ಟ್‌ಮಾರ್ಟಂಗೆ ಕಳುಹಿಸಿದ್ದಾರೆ.
“ಪತ್ನಿ ಮೇಘನ ಅವರ ನಿರಂತರ ಕಿರುಕುಳ ಮತ್ತು ಮಾನಸಿಕ ಹಿಂಸೆಯಿಂದ ನನ್ನ ಅಣ್ಣನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ಮೃತನ ತಂಗಿ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ
ಬೆಳಗಾವಿ: ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಡೆತ್‌ನೋಟ್ ಬರೆದಿಟ್ಟು, ಕಂಪ್ಯೂಟರ್ ಶಾಪ್‌ನಲ್ಲಿ ವೈರ್‌ನಿಂದ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಅನಗೋಳದ ದುರ್ಗಾ ಕಾಲೋನಿಯಲ್ಲಿ ನಡೆದಿದೆ. ತನ್ನ ಸಾವಿಗೆ ಪತ್ನಿಯೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಬಾಗ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 108 ಅಡಿಯಲ್ಲಿ ಕೇಸ್ ದಾಖಲಾಗಿದೆ.
ಸುನೀಲ್ ಮೂಲಿಮನಿ (33) ಎಂಬಾತ ತನ್ನ ಕಂಪ್ಯೂಟರ್ ಶಾಪ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಾಲ್ಕು ವರ್ಷಗಳ ಹಿಂದೆ ಪೂಜಾ ಎಂಬಾಕೆಯನ್ನು ಮದುವೆಯಾಗಿದ್ದ ಸುನೀಲ್‌ಗೆ ಮೂರು ವರ್ಷದ ಮಗುವಿದೆ. ಆತ್ಮಹತ್ಯೆಗೂ ಮುನ್ನ, “ನನ್ನ ಸಾವಿಗೆ ನನ್ನ ಪತ್ನಿಯೇ ಕಾರಣ” ಎಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಘಟನೆಯು ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಇದೇ ರೀತಿಯ ಕೆಲವು ಆತ್ಮಹತ್ಯೆ ಪ್ರಕರಣಗಳನ್ನು ನೆನಪಿಸುತ್ತದೆ. ಬೆಂಗಳೂರಿನ ಮಾರತ್ತಹಳ್ಳಿಯ ಟೆಕ್ಕಿ ಅತುಲ್ ಸುಭಾಷ್‌ನ ಆತ್ಮಹತ್ಯೆ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿತ್ತು. ಅತುಲ್ ತನ್ನ ಪತ್ನಿ ನಿಖಿತಾ ಸಿಂಘಾನಿಯಾ ಅವರ ಕಿರುಕುಳವೇ ಸಾವಿಗೆ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದರು. 6 ನಿಮಿಷ 50 ಸೆಕೆಂಡ್‌ನ ವಿಡಿಯೋ ರೆಕಾರ್ಡ್ ಮಾಡಿ, “ಜಸ್ಟೀಸ್ ಈಸ್ ಡ್ಯೂ, ನನಗೆ ನ್ಯಾಯ ಸಿಗಬೇಕು” ಎಂದು ಬೋರ್ಡ್‌ನಲ್ಲಿ ಬರೆದು, ಕುತ್ತಿಗೆಗೆ ಅದನ್ನು ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಖಿತಾ ವಿರುದ್ಧ ಕೊಲೆಗೆ ಯತ್ನ, ಅಸಹಜ ಲೈಂಗಿಕ ಕ್ರಿಯೆ, ಮತ್ತು ಕಿರುಕುಳ ಸೇರಿದಂತೆ 9 ಕೇಸ್‌ಗಳನ್ನು ದಾಖಲಿಸಲಾಗಿತ್ತು. ತನಿಖೆಯ ನಂತರ ಪೊಲೀಸರು ನಿಖಿತಾ, ಅವರ ತಾಯಿ ನಿಶಾ, ಮತ್ತು ಸಹೋದರ ಅನುರಾಗ್‌ರನ್ನು ಬಂಧಿಸಿದ್ದರು.
ಇದೇ ರೀತಿ, ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ತಿಪ್ಪಣ್ಣ ತನ್ನ ಪತ್ನಿ ಮತ್ತು ಮಾವನ ಕಿರುಕುಳಕ್ಕೆ ಬೇಸತ್ತು, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ತಿಪ್ಪಣ್ಣ ತನ್ನ ಡೆತ್‌ನೋಟ್‌ನಲ್ಲಿ, “ನೀನು ಸತ್ತರೆ ನನ್ನ ಮಗಳು ಚೆನ್ನಾಗಿರುತ್ತಾಳೆ” ಎಂದು ಮಾವನಿಂದ ನಿಂದನೆಗೊಳಗಾಗಿದ್ದಾಗಿ ಉಲ್ಲೇಖಿಸಿದ್ದರು.





