ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಗತಿ ಶಕ್ತಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತಿರುವ ಯಾರ್ಡ್ ನವೀಕರಣ ಮತ್ತು ಆಧುನೀಕರಣ ಕಾಮಗಾರಿಗಳ ಪರಿಣಾಮವಾಗಿ ಮುಂಬರುವ ಎರಡು ತಿಂಗಳ ಕಾಲ ರೈಲು ಸಂಚಾರದಲ್ಲಿ ಭಾರಿ ಬದಲಾವಣೆಗಳು ಆಗಲಿದೆ. ನಗರದ ಅತ್ಯಂತ ಜನನಿಬಿಡ ಸಾರಿಗೆ ಕೇಂದ್ರವಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲು ನಿಲ್ದಾಣದಲ್ಲಿ ಸುರಕ್ಷತೆ ಹೆಚ್ಚಿಸುವುದು ಹಾಗೂ ರೈಲು ಕಾರ್ಯಾಚರಣೆಯನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ಎರಡು ಪ್ರಮುಖ ರೈಲು ಮಾರ್ಗಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತಿದೆ.
ಜೂನ್ 16ರಿಂದ ಆರಂಭವಾಗುವ ಈ ಕಾಮಗಾರಿಗಳ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳ ಕಾಲ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ರೈಲ್ವೆ ಇಲಾಖೆಯ ಮಾಹಿತಿ ಪ್ರಕಾರ, ಈ ಅವಧಿಯಲ್ಲಿ ಒಟ್ಟು 58 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು, 26 ರೈಲುಗಳನ್ನು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಎರಡು ರೈಲುಗಳ ವೇಳಾಪಟ್ಟಿಯನ್ನು ಮರು ನಿಗದಿಪಡಿಸಲಾಗಿದ್ದು, ಐದು ಪ್ರಮುಖ ರೈಲುಗಳ ನಿಲುಗಡೆ ಅವಧಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಕೆಲವು ಆಯ್ದ ನಿಲ್ದಾಣಗಳಲ್ಲಿ ಈ ರೈಲುಗಳನ್ನು 15ರಿಂದ 60 ನಿಮಿಷಗಳವರೆಗೆ ನಿಯಂತ್ರಿಸಿ ಸಂಚಾರ ನಡೆಸಲಾಗುತ್ತದೆ. ಇದರಿಂದ ಪ್ರಯಾಣಿಕರು ತಮ್ಮ ಪ್ರಯಾಣ ಯೋಜನೆಗಳನ್ನು ಮುಂಚಿತವಾಗಿಯೇ ಪರಿಶೀಲಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
ಈ ಕಾಮಗಾರಿಯ ನೇರ ಪರಿಣಾಮ ಮೈಸೂರು ಹಾಗೂ ತುಮಕೂರು ಭಾಗದ ನಿತ್ಯ ಪ್ರಯಾಣಿಕರ ಮೇಲೆ ಹೆಚ್ಚಾಗಿ ಬೀಳಲಿದೆ. ಮೈಸೂರು ಮತ್ತು ಅಶೋಕಪುರಂ ರೈಲು ನಿಲ್ದಾಣಗಳಿಂದ ಸಂಚಾರ ಆರಂಭಿಸುವ ಅಥವಾ ಅಲ್ಲಿಗೆ ತಲುಪುವ 16 ಪ್ರಮುಖ ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಇದರೊಂದಿಗೆ ಕೆಎಸ್‌ಆರ್ ಬೆಂಗಳೂರು ನಗರವನ್ನು ಸುತ್ತಮುತ್ತಲಿನ ಉಪನಗರಗಳು ಹಾಗೂ ತುಮಕೂರಿನ ವಿವಿಧ ಭಾಗಗಳಿಗೆ ಸಂಪರ್ಕಿಸುವ ಒಂಬತ್ತು ಪ್ರಮುಖ ಮೆಮು ರೈಲುಗಳ ಸೇವೆಯನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಭಾಗಶಃ ರದ್ದುಗೊಂಡಿರುವ ಹಲವು ರೈಲುಗಳು ಕೆಎಸ್‌ಆರ್ ಬೆಂಗಳೂರು ನಿಲ್ದಾಣಕ್ಕೆ ಬರುವ ಬದಲಾಗಿ ನಗರದ ಇತರೆ ಉಪನಗರ ರೈಲು ನಿಲ್ದಾಣಗಳಲ್ಲೇ ತಮ್ಮ ಪ್ರಯಾಣವನ್ನು ಕೊನೆಗೊಳಿಸಲಿವೆ ಅಥವಾ ಅಲ್ಲಿಂದಲೇ ಮುಂದಿನ ಸಂಚಾರ ಆರಂಭಿಸಲಿವೆ. ಇದರ ಮಧ್ಯೆ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮೇಲೂ ಈ ಕಾಮಗಾರಿಯ ಪರಿಣಾಮ ಬೀಳಲಿದ್ದು, ಒಟ್ಟು 10 ವಂದೇ ಭಾರತ್ ರೈಲುಗಳ ನಿಲ್ದಾಣಗಳಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ ಸಾರ್ವಜನಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ವಂದೇ ಭಾರತ್ ರೈಲನ್ನು ಸಂಪೂರ್ಣವಾಗಿ ರದ್ದುಗೊಳಿಸದೆ, ಕೇವಲ ಅವುಗಳ ಆಗಮನ ಮತ್ತು ನಿರ್ಗಮನ ನಿಲ್ದಾಣಗಳಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ. ರೈಲುಗಳ ಸಂಚಾರದಲ್ಲಿ ಉಂಟಾಗಿರುವ ಈ ಬದಲಾವಣೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ರೈಲ್ವೆ ಇಲಾಖೆಯ ಅಧಿಕೃತ ಮಾಹಿತಿ ಮತ್ತು ವೇಳಾಪಟ್ಟಿಯನ್ನು ಪರಿಶೀಲಿಸಿಕೊಳ್ಳುವುದು ಸೂಕ್ತವಾಗಿದೆ.
