ಸಕಲೇಶಪುರದಲ್ಲಿ ನಿರಂತರ ಮಳೆಯಿಂದ ಗುಡ್ಡ ಕುಸಿತ ಭೀತಿ

BeFunky collage (1)

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಜನಜೀವನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಬಿರುಸುಗೊಂಡಿದ್ದು, ಇದೀಗ ರಾಷ್ಟ್ರೀಯ ಹೆದ್ದಾರಿ 75ರ ಸಂಚಾರಕ್ಕೂ ಅಪಾಯದ ನೆರಳು ಆವರಿಸಿದೆ. ವಿಶೇಷವಾಗಿ ಸಕಲೇಶಪುರ ತಾಲೂಕಿನ ಆನೆ ಮಹಲ್ ಸಮೀಪದ ಪ್ರದೇಶದಲ್ಲಿ ಗುಡ್ಡಗಳು ಕುಸಿಯುವ ಭೀತಿ ತೀವ್ರವಾಗಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿದೆ.

ನಿರಂತರ ಮಳೆಯಿಂದಾಗಿ ರಸ್ತೆ ಬದಿಯ ಗುಡ್ಡಗಳು ಸಡಿಲಗೊಂಡಿರುವ ಲಕ್ಷಣಗಳು ಕಾಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಯಾವ ಕ್ಷಣದಲ್ಲಾದರೂ ಮಣ್ಣು ಕುಸಿದು ಹೆದ್ದಾರಿಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಗುಡ್ಡ ಕುಸಿಯುವ ಭೀತಿ ಇದ್ದರೆ, ಮತ್ತೊಂದು ಕಡೆ ರಸ್ತೆ ಬದಿಯಲ್ಲಿ ನಿಂತಿರುವ ಬೃಹತ್ ಗಾತ್ರದ ಮರಗಳು ಸಹ ಅಪಾಯಕಾರಿಯಾಗಿ ಮಾರ್ಪಟ್ಟಿವೆ. ಮಳೆಯಿಂದ ನೆಲ ಸೊಪ್ಪುಗಟ್ಟಿರುವ ಕಾರಣ, ಮರಗಳ ಬೇರು ಭಾಗ ದುರ್ಬಲಗೊಂಡಿದ್ದು, ಅವು ಯಾವಾಗ ಬೇಕಾದರೂ ಹೆದ್ದಾರಿ ಮೇಲೆ ಉರುಳಿ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಆನೆ ಮಹಲ್ ಸಮೀಪದ ಹೆದ್ದಾರಿ ಭಾಗದಲ್ಲಿ ವಾಹನ ಸಂಚಾರ ಈಗಾಗಲೇ ಎಚ್ಚರಿಕೆಯಿಂದ ನಡೆಯುತ್ತಿದ್ದು, ಭಾರಿ ವಾಹನಗಳ ಚಾಲಕರು ವಿಶೇಷ ಜಾಗ್ರತೆ ವಹಿಸುತ್ತಿದ್ದಾರೆ. ಮಳೆ ಇದೇ ರೀತಿ ಮುಂದುವರಿದರೆ, ಸಂಚಾರಕ್ಕೆ ಇನ್ನಷ್ಟು ಅಡಚಣೆ ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವುದು ಅಪಾಯಕಾರಿಯಾಗಬಹುದು ಎಂಬ ಎಚ್ಚರಿಕೆಯನ್ನು ಸ್ಥಳೀಯರು ನೀಡುತ್ತಿದ್ದಾರೆ. ಕೆಲವು ಭಾಗಗಳಲ್ಲಿ ಈಗಾಗಲೇ ಮಣ್ಣು ಜಾರಿ ರಸ್ತೆ ಬದಿಗೆ ಹರಿದುಬಂದಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರವಾಸಿಗರು, ಸಾರ್ವಜನಿಕರು ಮತ್ತು ಸರಕು ಸಾಗಣೆ ವಾಹನ ಚಾಲಕರಿಗೆ ರಾಷ್ಟ್ರೀಯ ಹೆದ್ದಾರಿ 75 ಪ್ರಮುಖ ಮಾರ್ಗವಾಗಿರುವುದರಿಂದ, ಇಲ್ಲಿ ಸಂಭವಿಸಬಹುದಾದ ಯಾವುದೇ ಪ್ರಕೃತಿ ಅವಘಡವು ಸಂಚಾರ ವ್ಯವಸ್ಥೆಗೆ ದೊಡ್ಡ ಹೊಡೆತ ನೀಡಬಹುದು. ಸಕಲೇಶಪುರ ಭಾಗದಲ್ಲಿ ಮಳೆಗಾಲ ಆರಂಭವಾದಾಗಲೆಲ್ಲಾ ಗುಡ್ಡ ಕುಸಿತ, ಮರ ಬೀಳುವಂತಹ ಘಟನೆಗಳು ಮರುಕಳಿಸುತ್ತಿರುವುದು ಹೊಸದೇನಲ್ಲ. ಆದರೆ ಈ ಬಾರಿ ಮಳೆಯ ತೀವ್ರತೆ ಹೆಚ್ಚಿರುವುದರಿಂದ ಅಪಾಯದ ಪ್ರಮಾಣವೂ ಹೆಚ್ಚಾಗಿದೆ.

ಸ್ಥಳೀಯರು ಮತ್ತು ವಾಹನ ಸವಾರರು ಹೆದ್ದಾರಿ ಪಕ್ಕದಲ್ಲಿರುವ ಅಪಾಯಕಾರಿಯಾದ ಮರಗಳನ್ನು ತಕ್ಷಣ ತೆರವುಗೊಳಿಸಬೇಕು, ಗುಡ್ಡ ಕುಸಿಯುವ ಸಾಧ್ಯತೆ ಇರುವ ಪ್ರದೇಶಗಳನ್ನು ಗುರುತಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮಳೆ ಮುಂದುವರಿದರೆ, ಈ ಭಾಗದಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ನಿಯಂತ್ರಿಸುವ ಪರಿಸ್ಥಿತಿಯೂ ಎದುರಾಗಬಹುದು. ಸಕಲೇಶಪುರದಲ್ಲಿ ಭಾರಿ ಮಳೆಯ ನಡುವೆಯೇ ಒಂದು ಕಡೆ ಮಣ್ಣು ಕುಸಿಯುವ ಆತಂಕ, ಮತ್ತೊಂದು ಕಡೆ ಮರಗಳು ಉರುಳುವ ಭಯ ಜನರನ್ನು ಕಂಗಾಲಾಗಿಸಿದೆ.

Exit mobile version