ರಾಜ್ಯದಲ್ಲಿ ಮುಂದುವರೆದ ಮಳೆ ಅಬ್ಬರ: ಮುಂದಿನ 2-3 ದಿನ ಭಾರೀ ಮಳೆ

BeFunky collage (1)

ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆ ಅಬ್ಬರ ಹೆಚ್ಚಾಗಲಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದ್ದು, ಇದರ ಜೊತೆಗೆ ಧಾರಾಕಾರ ಮಳೆಯೂ ಸುರಿಯಲಿದೆ ಎಂದು ಇಲಾಖೆ ತಿಳಿಸಿದೆ.

ಕರಾವಳಿ ಭಾಗದ ಸಮುದ್ರ ತೀರ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಈಗಾಗಲೇ ಮುನ್ನೆಚ್ಚರಿಕೆ ಸಂದೇಶ ರವಾನಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದ್ದು, ಸ್ಥಳೀಯ ಆಡಳಿತವೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಭಾರೀ ಗಾಳಿ ಮತ್ತು ಮಳೆಯಿಂದ ಮರಗಳು ಉರುಳುವ, ವಿದ್ಯುತ್ ವ್ಯತ್ಯಯ ಉಂಟಾಗುವ ಹಾಗೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಸಂಚರಿಸಬಾರದು ಎಂದು ಸಲಹೆ ನೀಡಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ. ಮಡಿಕೇರಿಯಲ್ಲಿ ಗರಿಷ್ಠ 24 ಡಿಗ್ರಿ ಮತ್ತು ಕನಿಷ್ಠ 21 ಡಿಗ್ರಿ ತಾಪಮಾನ ಇರಲಿದೆ. ಮಂಗಳೂರು, ಉಡುಪಿ ಮತ್ತು ಕಾರವಾರ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಗಾಳಿ ವೇಗವೂ ಹೆಚ್ಚು ಇರಲಿದೆ. ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಭಾಗಗಳಲ್ಲೂ ಮಳೆ ಮುಂದುವರಿಯುವ ಮುನ್ಸೂಚನೆ ನೀಡಲಾಗಿದೆ.

ಇನ್ನೊಂದೆಡೆ, ಉತ್ತರ ಒಳನಾಡು ಮತ್ತು ಹೈದರಾಬಾದ್ ಕರ್ನಾಟಕ ಭಾಗಗಳಲ್ಲೂ ಮಳೆ ಚಟುವಟಿಕೆ ಹೆಚ್ಚಾಗಲಿದೆ. ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ಗದಗ, ಕೊಪ್ಪಳ, ವಿಜಯಪುರ, ಕಲಬುರಗಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಜೊತೆಗೆ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಬಳ್ಳಾರಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 33 ರಿಂದ 34 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುವ ಸಾಧ್ಯತೆಯಿದೆ.

ನಗರವಾರು ಹವಾಮಾನ ವಿವರಗಳ ಪ್ರಕಾರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ ಮತ್ತು ಚಾಮರಾಜನಗರ ಭಾಗಗಳಲ್ಲೂ ಮಳೆ ಸಾದ್ಯತೆ ಇದೆ. ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಮೋಡ ಕವಿದ ವಾತಾವರಣದೊಂದಿಗೆ ಚದುರಿದ ಮಳೆಯಾಗಬಹುದು. ಮುಂದಿನ ಮೂರು ದಿನ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಅಬ್ಬರ ಮುಂದುವರಿಯಲಿದ್ದು, ಜನರು ಹವಾಮಾನ ಇಲಾಖೆ ಸೂಚನೆಗಳನ್ನು ಪಾಲಿಸಿ ಸುರಕ್ಷತೆಯತ್ತ ಗಮನಹರಿಸುವುದು ಅಗತ್ಯವಾಗಿದೆ.

Exit mobile version