ಹಾಸನ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಶೇಷವಾಗಿ ಬೇಲೂರು ಹಾಗೂ ಆಲೂರು ತಾಲೂಕಿನ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತಾಲೂಕು ಆಡಳಿತ ಈ ತೀರ್ಮಾನ ಕೈಗೊಂಡಿದೆ.
ಬೇಲೂರು ತಾಲೂಕಿನ ಅರೇಹಳ್ಳಿ, ಬಿಕ್ಕೋಡು, ಚೀಕನಹಳ್ಳಿ, ಕಸಬಾ-1 ಹಾಗೂ ಕಸಬಾ-2 ವಲಯಗಳ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಿ ಬೇಲೂರು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಆದೇಶ ಹೊರಡಿಸಿದ್ದಾರೆ. ಇದೇ ರೀತಿ ಆಲೂರು ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೂ ರಜೆ ಘೋಷಿಸಲಾಗಿದೆ. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ವಿದ್ಯಾರ್ಥಿಗಳು ಈ ದಿನ ಶಾಲೆಗೆ ಹಾಜರಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಲೂರು ತಾಲೂಕು ತಹಶೀಲ್ದಾರ್ ಮಲ್ಲಿಕಾರ್ಜುನ್ ಸೂಚಿಸಿದ್ದಾರೆ.
ಈ ಭಾಗಗಳಲ್ಲಿ ವ್ಯಾಪಕ ಮಳೆಯೊಂದಿಗೆ ಬಿರುಗಾಳಿಯೂ ಮುಂದುವರಿದಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಾಲೂಕು ಆಡಳಿತ ಸ್ಪಷ್ಟಪಡಿಸಿದೆ. ಪೋಷಕರು ಮತ್ತು ಸಾರ್ವಜನಿಕರು ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.
ಇನ್ನೊಂದೆಡೆ, ಹಾಸನ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಹೇಮಾವತಿ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ. ಸಕಲೇಶಪುರ, ಆಲೂರು, ಬೇಲೂರು, ಹಾಸನ ಹಾಗೂ ಅರಕಲಗೂಡು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಾಸನದ ಮಲೆನಾಡು ಪ್ರದೇಶಗಳ ಜೊತೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಮಳೆ ಬಿರುಸು ಪಡೆದಿದೆ. ಈ ಹಿನ್ನೆಲೆಯಲ್ಲಿ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾಗಿದೆ. ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ರೈತರಲ್ಲಿ ಆಶಾಭಾವನೆ ಮೂಡಿಸಿದೆ.
ಇದೇ ವೇಳೆ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಉತ್ತಮ ಮಳೆಯ ಪರಿಣಾಮ ತುಂಗಾ ಅಣೆಕಟ್ಟೆಯೂ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರ ಪರಿಣಾಮ ದಾವಣಗೆರೆಯ ಹರಿಹರ ಭಾಗದ ತುಂಗಭದ್ರಾ ನದಿಗೆ ಮತ್ತೆ ಜೀವ ಕಳೆ ಬಂದಿದೆ. ನೀರಿಲ್ಲದೆ ಬರಿದಾಗಿದ್ದ ನದಿ ಇದೀಗ ಮೈದುಂಬಿ ಹರಿಯುತ್ತಿದ್ದು, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ತುಂಗಭದ್ರಾ ನದಿ ದಾವಣಗೆರೆ ಜಿಲ್ಲೆಯ 22 ಕೆರೆಗಳಿಗೆ ಹಾಗೂ ಚಿತ್ರದುರ್ಗ ಜಿಲ್ಲೆಯ 44 ಕೆರೆಗಳಿಗೆ ನೀರು ಪೂರೈಸುವ ಪ್ರಮುಖ ಜೀವನಾಡಿಯಾಗಿದೆ. ಹರಿಹರ ತಾಲೂಕಿನ ರಾಜನಹಳ್ಳಿ ಜಾಕ್‌ವೆಲ್ ಮೂಲಕವೂ ನೀರು ಕೊಂಡೊಯ್ಯಲಾಗುತ್ತಿದೆ. ಹೀಗಾಗಿ ಮಲೆನಾಡಿನ ಮಳೆ ಕೇವಲ ಹಾಸನ ಜಿಲ್ಲೆಯಲ್ಲಷ್ಟೇ ಅಲ್ಲದೆ ಮಧ್ಯ ಕರ್ನಾಟಕ ಭಾಗದ ಕೃಷಿ ಚಟುವಟಿಕೆಗಳಿಗೂ ಹೊಸ ಚೈತನ್ಯ ತುಂಬಿದೆ.
