ಪ್ರಸಿದ್ಧ ಹಾಸನಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭಕ್ತರಿಗೆ ಸುಗಮ ದರ್ಶನ ಕಲ್ಪಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಗುರುವಾರ ಹಾಸನಾಂಬ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದ್ದು, ಈ ಬಾರಿ ಗೋಲ್ಡ್ ಪಾಸ್ ಹೊಂದಿರುವ ಒಬ್ಬರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನಾಂಬ ಜಾತ್ರಾ ಮಹೋತ್ಸವವನ್ನು ನಾಡಹಬ್ಬದ ರೀತಿಯಲ್ಲಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಲಕ್ಷಾಂತರ ಭಕ್ತರಿಗೆ ದೇವಿಯ ದರ್ಶನಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಗೋಲ್ಡ್ ಪಾಸ್ ದರ್ಶನಕ್ಕೆ ಸಮಯ ನಿಗದಿ
ಗೋಲ್ಡ್ ಪಾಸ್ ಹೊಂದಿರುವ ಭಕ್ತರಿಗೆ ಬೆಳಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಪ್ರೋಟೋಕಾಲ್ ವ್ಯಾಪ್ತಿಗೆ ಬರುವ ಗಣ್ಯರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ದೇವಿಯ ಗರ್ಭಗುಡಿಯ ಬಾಗಿಲನ್ನು ಪದೇಪದೆ ಮುಚ್ಚದಂತೆ ಪ್ರಧಾನ ಅರ್ಚಕರಿಗೆ ಮನವಿ ಮಾಡಲಾಗಿದೆ. ಒಬ್ಬರೇ ಅರ್ಚಕರು ನಿರಂತರವಾಗಿ ಪೂಜೆ ಸಲ್ಲಿಸುವುದರಿಂದ ಆಯಾಸವಾಗುವ ಸಾಧ್ಯತೆ ಇರುವುದರಿಂದ, ಈ ಬಾರಿ ಹೆಚ್ಚಿನ ಅರ್ಚಕರನ್ನು ನಿಯೋಜಿಸುವಂತೆ ಕೋರಲಾಗಿದೆ. ಇದಕ್ಕೆ ಪ್ರಧಾನ ಅರ್ಚಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಗರ್ಭಗುಡಿಯ ಬಾಗಿಲನ್ನು ಗಂಟೆಗಟ್ಟಲೆ ಮುಚ್ಚದೆ ದರ್ಶನಕ್ಕೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ. ಇದರಿಂದ ಭಕ್ತರು ದೀರ್ಘಕಾಲ ಸರತಿ ಸಾಲಿನಲ್ಲಿ ಕಾಯುವುದು ತಪ್ಪಲಿದೆ ಎಂಬ ನಿರೀಕ್ಷೆಯಿದೆ.
ಹಾಸನಾಂಬ ಜಾತ್ರೆಯಲ್ಲಿ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮ
ಹಾಸನ ನಗರಸಭೆಯ ವಸ್ತುಪ್ರದರ್ಶನದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಮಹಿಳೆಯರು ಹಾಗೂ ಪುರುಷರಿಗಾಗಿ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, 400ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ಜೊತೆಗೆ ಕಬಡ್ಡಿ, ವಾಲಿಬಾಲ್ ಪಂದ್ಯಾವಳಿಗಳನ್ನೂ ಆಯೋಜಿಸಲಾಗಿದೆ.
ಹಳ್ಳಿಕಾರ್ ಮತ್ತು ಅಮೃತ್ ಮಹಲ್ ತಳಿಗಳ ಪ್ರದರ್ಶನ, ರಂಗೋಲಿ ಸ್ಪರ್ಧೆ, ಶ್ವಾನ ಪ್ರದರ್ಶನ, ಕೋಲಾಟ ಸೇರಿದಂತೆ ಹಲವು ಕಾರ್ಯಕ್ರಮಗಳು ಜಾತ್ರೆಯ ಆಕರ್ಷಣೆಯಾಗಲಿವೆ. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುತ್ತದೆ.
ನವೆಂಬರ್ 1ರಿಂದ 6ರೊಳಗೆ ಮುಖ್ಯಮಂತ್ರಿ ದೇವಿ ದರ್ಶನಕ್ಕೆ ಆಗಮಿಸಲಿದ್ದಾರೆ. ನವೆಂಬರ್ 6ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನಾಂಬ ದೇವಿಯ ದರ್ಶನ ಪಡೆಯಲಿದ್ದಾರೆ ಎಂದು ಸಚಿವರು ತಿಳಿಸಿದರು.
ಪ್ರಸಾದ ವಿತರಣೆಯ ಜವಾಬ್ದಾರಿಯನ್ನು ಇಸ್ಕಾನ್ಗೆ ನೀಡಲಾಗಿದ್ದು, ಭಕ್ತರಿಗೆ ಉಚಿತ ಪ್ರಸಾದ ವಿತರಣೆ ಮಾಡಲಾಗುತ್ತದೆ. ಎರಡು ಲಾಡುಗಳಿಗೆ 56.16 ರೂಪಾಯಿ ದರ ನಿಗದಿಪಡಿಸಿ ಇಸ್ಕಾನ್ಗೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಹಾಸನದ ಸ್ಥಳೀಯರಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆಗಳ ಬಗ್ಗೆಯೂ ಸಚಿವರು ಪ್ರತಿಕ್ರಿಯಿಸಿ, ಹಾಸನಾಂಬ ದೇವಿ ಇಡೀ ರಾಜ್ಯದ ಭಕ್ತರ ಆರಾಧ್ಯ ದೈವವಾಗಿದ್ದು, ದರ್ಶನದ ವಿಚಾರದಲ್ಲಿ ಸಂಕುಚಿತ ಮನೋಭಾವನೆ ಬೇಡ ಎಂದರು.
ಎಲ್ಲ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಸಲಹೆ, ಸಹಕಾರ ನೀಡಬೇಕು. ಇದು ನಾಡಿನ ಹಬ್ಬವಾಗಿದ್ದು, ಜಾತ್ರೆ ಮುಗಿದ ಬಳಿಕ ರಾಜಕೀಯ ಮಾಡಬಹುದು. ಆದರೆ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಬೆರೆಸದೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕೆ.ಎಂ. ಶಿವಲಿಂಗೇಗೌಡ ಮನವಿ ಮಾಡಿದರು.
