ಹಾಸನಾಂಬ ದರ್ಶನಕ್ಕೆ ಕ್ಷಣಗಣನೆ: ಇಂದು ಗರ್ಭಗುಡಿ ಬಾಗಿಲು ಓಪನ್

Your paragraph text 2026 10 29T102326.973

ಹಾಸನದ ಅಧಿದೇವತೆ, ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಶ್ರೀ ಹಾಸನಾಂಬ ದೇವಿಯ ಗರ್ಭಗುಡಿ ಬಾಗಿಲು ತೆರೆಯುವ ಕ್ಷಣ ಸಮೀಪಿಸಿದೆ. ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು (ಅ.29) ಮಧ್ಯಾಹ್ನ 12 ಗಂಟೆಯ ನಂತರ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತ ಭಕ್ತರ ಸಂಭ್ರಮ ಕಳೆಗಟ್ಟಿದ್ದು, ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಪ್ರತಿವರ್ಷದಂತೆ ಈ ಬಾರಿಯೂ ಹಾಸನಾಂಬ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಅ.29ರಿಂದ ನ.11ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಗುರುವಾರ ಮಧ್ಯಾಹ್ನ ಅರಸು ವಂಶಸ್ಥ ನಂಜರಾಜೇ ಅರಸ್ ಅವರು ಗೊನೆಯುಳ್ಳ ಬಾಳೆ ಕಂಬ ಕಡಿದ ಬಳಿಕ ಗರ್ಭಗುಡಿ ಬಾಗಿಲು ತೆರೆಯುವ ಧಾರ್ಮಿಕ ವಿಧಿ ನೆರವೇರಲಿದೆ.

ಹಾಸನಾಂಬ ದೇವಿಯ ಗರ್ಭಗುಡಿ ಬಾಗಿಲು ತೆರೆಯುವ ಸಂದರ್ಭದಲ್ಲಿ ಹಲವು ವಿಶೇಷತೆಗಳು ಭಕ್ತರ ಗಮನ ಸೆಳೆಯುತ್ತವೆ. ಕಳೆದ ವರ್ಷ ದೇವಾಲಯದ ಗರ್ಭಗುಡಿಯಲ್ಲಿ ಹಚ್ಚಲಾಗಿದ್ದ ದೀಪ ಈ ಬಾರಿಯೂ ಉರಿಯುತ್ತಿರುತ್ತದೆ ಎಂಬ ನಂಬಿಕೆ ಇದೆ. ಅಲ್ಲದೇ ದೇವಿಗೆ ಅರ್ಪಿಸಲಾಗಿದ್ದ ಹೂವುಗಳು ಬಾಡಿರುವುದಿಲ್ಲ ಹಾಗೂ ನೈವೇದ್ಯ ಹಳಸಿರುವುದಿಲ್ಲ ಎಂಬುದು ಹಾಸನಾಂಬ ದೇವಿಯ ಪವಾಡವೆಂದು ಭಕ್ತರು ನಂಬುತ್ತಾರೆ.

ಇಂದು ಗರ್ಭಗುಡಿ ಬಾಗಿಲು ತೆರೆದ ಬಳಿಕ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅ.30ರ ಬೆಳಗ್ಗೆ 6 ಗಂಟೆಯಿಂದ ನ.10ರವರೆಗೆ ಭಕ್ತರಿಗೆ ಹಾಸನಾಂಬ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ₹1,000 ಹಾಗೂ ₹300 ದರದ ವಿಶೇಷ ದರ್ಶನದ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.

ಗರ್ಭಗುಡಿ ಬಾಗಿಲು ತೆರೆಯುವ ವೇಳೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಸಿದ್ದಲಿಂಗಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಮುಜರಾಯಿ ಖಾತೆ ಸಚಿವ ಬಸಂತಪ್ಪ ಸೇರಿದಂತೆ ಹಲವು ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

ಜಾತ್ರಾ ಮಹೋತ್ಸವದ ಅಂಗವಾಗಿ ಹಾಸನ ನಗರಸಭೆ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಸ್ತು ಪ್ರದರ್ಶನದ ಆವರಣದಲ್ಲಿ ಕುಸ್ತಿ, ವಾಲಿಬಾಲ್, ಕಬ್ಬಡಿ ಪಂದ್ಯಾವಳಿಗಳು ಹಾಗೂ ರಂಗೋಲಿ ಸ್ಪರ್ಧೆ ನಡೆಯಲಿದೆ. ಇದರ ಜೊತೆಗೆ ಹಳ್ಳಿಕಾರ್, ಅಮೃತ್‌ಮಹಲ್ ತಳಿಯ ಜಾನುವಾರುಗಳು, ಶ್ವಾನ, ಬೆಕ್ಕು ಹಾಗೂ ಟಗರುಗಳ ಪ್ರದರ್ಶನವೂ ಆಯೋಜಿಸಲಾಗಿದೆ.

ಭಕ್ತರ ಸುರಕ್ಷತೆಗೆ ಜಿಲ್ಲಾಡಳಿತ ವಿಶೇಷ ಆದ್ಯತೆ ನೀಡಿದೆ. ಮೂರು ಪಾಳಿಯಲ್ಲಿ 2,000ಕ್ಕೂ ಅಧಿಕ ಪೊಲೀಸರು ಹಾಗೂ ಹೋಮ್‌ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ದೇವಾಲಯದ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಧರ್ಮದರ್ಶನದ ಸಾಲಿನಲ್ಲಿ ನೂಕುನುಗ್ಗಲು ಉಂಟಾಗದಂತೆ ಬ್ಯಾರಿಕೇಡ್ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಮಳೆ ಸಂದರ್ಭದಲ್ಲಿ ಭಕ್ತರಿಗೆ ತೊಂದರೆಯಾಗದಂತೆ ಸರತಿ ಸಾಲಿನಲ್ಲಿ ಟೆಂಟ್‌ಗಳನ್ನೂ ನಿರ್ಮಿಸಲಾಗಿದೆ.

Exit mobile version