ರಾಯಚೂರಿನ ಚಂದ್ರಮೌಳೇಶ್ವರ ಸನ್ನಿಧಿಯಲ್ಲಿ ಅದ್ದೂರಿ ಪಾರ್ವತಿ-ಪರಮೇಶ್ವರ ಕಲ್ಯಾಣೋತ್ಸವ

Untitled design 2026 02 15T231812.712

ರಾಯಚೂರು: ಜಿಲ್ಲೆಯಾದ್ಯಂತ ಮಹಾಶಿವರಾತ್ರಿಯ ಸಡಗರ ಮನೆಮಾಡಿದ್ದು, ಐತಿಹಾಸಿಕ ಹಿನ್ನೆಲೆಯುಳ್ಳ ರಾಯಚೂರಿನ ಚಂದ್ರಮೌಳೇಶ್ವರ ದೇವಾಲಯದ ಆವರಣದಲ್ಲಿ ಪಾರ್ವತಿ ಪರಮೇಶ್ವರ ಕಲ್ಯಾಣೋತ್ಸವವು ಅತ್ಯಂತ ಭಕ್ತಿಭಾವ ಹಾಗೂ ಸಂಭ್ರಮ ಸಡಗರದಿಂದ ನೆರವೇರಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ಈ ದಿವ್ಯ ಕಲ್ಯಾಣೋತ್ಸವವನ್ನ ಸಾವರಾರು ಭಕ್ತರು ಕಣ್ತುಂಬಿಕೊಂಡರು.

ಮೆರವಣಿಗೆಯ ಮೂಲಕ ಆಗಮಿಸಿದ ದೇವಿ

ಐತಿಹಾಸಿಕ ಉದ್ಭವ ಶಿವಲಿಂಗಕ್ಕೆ ಪ್ರಸಿದ್ಧಿಯಾದ ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಬಾರಿಯ ವಿಶೇಷ ಆಕರ್ಷಣೆಯೆಂದರೆ ಪಾರ್ವತಿ-ಪರಮೇಶ್ವರರ ಕಲ್ಯಾಣೋತ್ಸವ. ವಿವಿಧ ಮಂಗಳ ವಾದ್ಯಗಳ ಘೋಷದೊಂದಿಗೆ, ನಗರದ ಬಸವನಭಾವಿ ಆಂಜನೇಯ ದೇವಸ್ಥಾನದಿಂದ ಪಾರ್ವತಿ ದೇವಿಯ ಮೂರ್ತಿಯನ್ನು ಭವ್ಯ ಮೆರವಣಿಗೆಯ ಮೂಲಕ ಕರೆತರಲಾಯಿತು. ಮೆರವಣಿಗೆಯುದ್ದಕ್ಕೂ ಭಕ್ತರು ಶಿವನನ್ನ ನೆನೆಯುತ್ತಾ ಸಾಂಪ್ರದಾಯಿಕ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

101 ದಂಪತಿಗಳಿಂದ ಸಮೂಹ ಶಿವಪೂಜೆ

ಈ ಬಾರಿಯ ಕಲ್ಯಾಣೋತ್ಸವದ ಮತ್ತೊಂದು ವಿಶೇಷವೆಂದರೆ ಸಮೂಹ ಪೂಜೆ. ಒಟ್ಟು 101 ದಂಪತಿಗಳಿಗೆ ಏಕಕಾಲದಲ್ಲಿ ಶಿವ ಪೂಜೆಯನ್ನು ನೆರವೇರಿಸಲು ದೇವಾಲಯದ ಆಡಳಿತ ಮಂಡಳಿ ಅವಕಾಶ ಕಲ್ಪಿಸಿಕೊಟ್ಟಿತ್ತು. ವೇದಮಂತ್ರಗಳ ಪಠಣದ ನಡುವೆ ದಂಪತಿಗಳು ಭಕ್ತಿಯಿಂದ ಶಿವ-ಪಾರ್ವತಿಯರನ್ನು ಆರಾಧಿಸಿದರು. ಈ ದೃಶ್ಯವು ದೇವಾಲಯದ ಆವರಣದಲ್ಲಿ ಆಧ್ಯಾತ್ಮಿಕ ಕಳೆಯನ್ನು ಹೆಚ್ಚಿಸಿತ್ತು.

ಮಹಾಶಿವರಾತ್ರಿಯ ಪರ್ವಕಾಲದಲ್ಲಿ ಭಕ್ತರಿಗೆ ಶಿವಲಿಂಗದ ಸ್ಪರ್ಶ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಮಧ್ಯರಾತ್ರಿಯಿಂದಲೇ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಉದ್ಭವ ಶಿವಲಿಂಗಕ್ಕೆ ನಮಸ್ಕರಿಸಿದರು. ಹಗಲಿಡೀ ನಡೆದ ಭಜನೆ, ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಾವಿರಾರು ಭಕ್ತರು ಶಿವನನ್ನ ಆರಾಧಿಸುತ್ತಾ ಭಕ್ತಿಯಲ್ಲಿ ಮಿಂದೆದ್ದರು.

ಕಲ್ಯಾಣೋತ್ಸವದ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಒಟ್ಟಾರೆಯಾಗಿ ರಾಯಚೂರಿನ ಚಂದ್ರಮೌಳೇಶ್ವರ ದೇವಾಲಯವು ಶಿವಭಕ್ತರ ಹರ್ಷೋದ್ಗಾರದಿಂದ ಕೈಲಾಸದಂತೆ ಕಂಗೊಳಿಸುತ್ತಿತ್ತು.

ಮೈಸೂರು ಅರಮನೆ ಆವರಣದಲ್ಲಿ 11 ಕೆಜಿ ಚಿನ್ನದ ಮುಖವಾಡ ಧರಿಸಿ ದರ್ಶನ ನೀಡಿದ ತ್ರಿನೇಶ್ವರ ಸ್ವಾಮಿ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಾಶಿವರಾತ್ರಿಯ ಸಡಗರ ಕಳೆಗಟ್ಟಿದೆ. ಅರಮನೆ ಆವರಣದ ಆಗ್ನೇಯ ದಿಕ್ಕಿನಲ್ಲಿರುವ ಐತಿಹಾಸಿಕ ಪ್ರಸಿದ್ಧ ಶ್ರೀ ತ್ರಿನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವನಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತಿದ್ದು, ಭಕ್ತ ಸಾಗರವೇ ಹರಿದು ಬರುತ್ತಿದೆ.

11 ಕೆಜಿ ಚಿನ್ನದ ಮುಖವಾಡದ ವೈಭವ

ಈ ವರ್ಷದ ಶಿವರಾತ್ರಿಯ ಪ್ರಮುಖ ಆಕರ್ಷಣೆ ಎಂದರೆ ತ್ರಿನೇಶ್ವರ ಸ್ವಾಮಿಗೆ ಧಾರಣೆ ಮಾಡಲಾದ 11 ಕೆಜಿ ತೂಕದ ಚಿನ್ನದ ಮುಖವಾಡ. ಬೆಳಗಿನ ಜಾವವೇ ದೇವಾಲಯದ ಅರ್ಚಕರು ಮೂಲಮೂರ್ತಿಗೆ ವಿಶೇಷ ಅಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ರುದ್ರಾಭಿಷೇಕಗಳನ್ನು ನೆರವೇರಿಸಿದರು. ಪೂಜಾ ವಿಧಿವಿಧಾನಗಳ ನಂತರ, ಜಿಲ್ಲಾ ಖಜಾನೆಯಿಂದ ಬಿಗಿ ಭದ್ರತೆಯಲ್ಲಿ ತರಲಾಗಿದ್ದ ಚಿನ್ನದ ಮುಖವಾಡವನ್ನು ಸ್ವಾಮಿಗೆ ತೊಡಗಿಸಲಾಯಿತು. ಈ ಅಪರೂಪದ ಸುಂದರ ರೂಪವನ್ನು ಕಣ್ತುಂಬಿಕೊಳ್ಳಲು ಭಕ್ತರು ಮುಂಜಾನೆಯಿಂದಲೇ ಕಿಲೋಮೀಟರ್‌ಗಟ್ಟಲೆ ಸಾಲಿನಲ್ಲಿ ನಿಂತಿದ್ದರು.

ಪೂಜಾ ಕೈಂಕರ್ಯಗಳು ಮತ್ತು ಅಲಂಕಾರ

ದೇವಸ್ಥಾನದ ಸ್ಥಾನಿಕರಾದ ವೆಂಕಟೇಶ್ ಅವರ ನೇತೃತ್ವದಲ್ಲಿ ಶಿವರಾತ್ರಿಯ ಅಂಗವಾಗಿ ನಾಲ್ಕು ಯಾಮಗಳ ಪೂಜೆ ನಿರಂತರವಾಗಿ ನಡೆಯುತ್ತಿದೆ. ಇಡೀ ದೇವಾಲಯದ ಸಂಕೀರ್ಣವನ್ನು ವಿವಿಧ ಬಗೆಯ ಸುಗಂಧಭರಿತ ಹೂವುಗಳು ಮತ್ತು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದ್ದು, ಅರಮನೆಯ ಆವರಣಕ್ಕೆ ಕೈಲಾಸದ ಕಳೆ ಬಂದಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು ಮತ್ತು ಸಾಲಿನಲ್ಲಿ ನಿಲ್ಲಲು ನೆರಳಿನ ವ್ಯವಸ್ಥೆ ಮಾಡಲಾಗಿದೆ.

ಬಿಗಿ ಪೊಲೀಸ್ ಬಂದೋಬಸ್ತ್

ಸಾವಿರಾರು ಭಕ್ತರು ಏಕಕಾಲದಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಮೈಸೂರು ನಗರ ಪೊಲೀಸರು ವ್ಯಾಪಕ ಭದ್ರತೆ ಒದಗಿಸಿದ್ದಾರೆ. ಎಸಿಪಿ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳು ಹಾಗೂ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ವಹಿಸಲಾಗುತ್ತಿದ್ದು, ಚಿನ್ನದ ಮುಖವಾಡ ಇರುವುದರಿಂದ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.

ರುದ್ರಾಕ್ಷಿ ಮಂಟಪೋತ್ಸವದೊಂದಿಗೆ ಸಮಾರೋಪ

ಶಿವರಾತ್ರಿಯ ಜಾಗರಣೆಯ ನಂತರ, ಸೋಮವಾರ ಬೆಳಿಗ್ಗೆ ವಿಶೇಷವಾದ ರುದ್ರಾಕ್ಷಿ ಮಂಟಪೋತ್ಸವ ಜರುಗಲಿದೆ. ಈ ಮಂಟಪೋತ್ಸವದ ಬಳಿಕ ಮಹಾಶಿವರಾತ್ರಿಯ ಅಧಿಕೃತ ಪೂಜಾ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿವೆ. ಈ ಐತಿಹಾಸಿಕ ದೇವಾಲಯವು ರಾಜರ ಕಾಲದಿಂದಲೂ ಶಿವರಾತ್ರಿಯಂದು ವಿಶೇಷ ಮಹತ್ವ ಪಡೆದಿದ್ದು, ಮೈಸೂರು ಪ್ರಾಂತ್ಯದ ಜನರಿಗೆ ಇದು ಶ್ರದ್ಧಾ ಕೇಂದ್ರವಾಗಿದೆ. ಅರಮನೆ ಆವರಣದಲ್ಲಿ ಇಂದು ಲೈಟಿಂಗ್ಸ್‌ ಸಹ ಇರಲಿದ್ದು ಸಂಜೆ ವೇಳೆಗೆ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

Exit mobile version