ಸಂಕ್ರಾಂತಿ ವಿಸ್ಮಯ: ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸಿದ ಸೂರ್ಯರಶ್ಮಿ

Untitled design 2026 01 15T184852.548

ಬೆಂಗಳೂರು : ಉತ್ತರಾಯಣದ ಪುಣ್ಯಕಾಲದಲ್ಲಿ, ಬಸವನಗುಡಿಯ ಐತಿಹಾಸಿಕ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ಸಂಕ್ರಾಂತಿಯಂದು ಸಂಜೆಯ ಸೂರ್ಯರಶ್ಮಿ ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿ ಶಿವಲಿಂಗವನ್ನು ಸ್ಪರ್ಶಿಸುವ ಈ ಅಪೂರ್ವ ಖಗೋಳೀಯ ಘಟನೆಯನ್ನು ನೋಡಲು ಭಕತ್ರ ದಂಡೇ ನೆರೆದಿತ್ತು.

ಈ ವರ್ಷ ಸಂಭವಿಸಿದ ಈ ವಿಸ್ಮಯಕ್ಕೆ ಸಮಯದಲ್ಲಿ ಸ್ವಲ್ಪ ಬದಲಾವಣೆ ಕಂಡುಬಂತು. ಸುಮಾರು ಸಂಜೆ 5:17 ಗಂಟೆಗೆ, ದೇವಾಲಯದ ವಿಶೇಷ ರಚನೆಯ ಹಂಸದ್ವಾರದ ಮೂಲಕ ಸೂರ್ಯಕಿರಣಗಳು ಪ್ರವೇಶಿಸಿ, ಮೊದಲು ನಂದಿಯ ಪ್ರತಿಮೆಯನ್ನು ಸ್ಪರ್ಶಿಸಿದವು. ಅಲ್ಲಿಂದ ನಂದಿಯ ಕೊಂಬಿನ ಮೂಲಕ ಹಾದು, ಈಶ್ವರನ ಪೀಠವನ್ನು ಮುಟ್ಟಿ, ಅಂತಿಮವಾಗಿ ಗರ್ಭಗುಡಿಯಲ್ಲಿನ ಶಿವಲಿಂಗದ ಮೇಲೆ ಸುಮಾರು ಆರು ನಿಮಿಷಗಳ ಕಾಲ ಬಿದ್ದವು. ಸೂರ್ಯ ಉತ್ತರಾಯಣಕ್ಕೆ ಪಥ ಬದಲಾಯಿಸಿದ ಈ ದೃಶ್ಯವನ್ನ ಭಕ್ತರು ಕಣ್ತುಂಬಿಕೊಂಡರು.

ಈ ಪವಿತ್ರ ಕ್ಷಣಕ್ಕೆ ಸಮನ್ವಯಗೊಳಿಸಿ, ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಅವರು ಪೂರ್ಣಕುಂಭ ಅಭಿಷೇಕವನ್ನು ನಡೆಸಿದರು. ಸೂರ್ಯರಶ್ಮಿ ಲಿಂಗಸ್ಪರ್ಶ ಮಾಡಿದಾಗಲೇ ದೀಪಾರಾಧನೆ ಪ್ರಾರಂಭವಾಯಿತು. ಸಾವಿರಾರು ಭಕ್ತರು ಈ ದೃಶ್ಯವನ್ನು ನೋಡವ ಸಲುವಾಗಿ, ದೇವಾಲಯ ಆವರಣದಲ್ಲಿ ವಿಶೇಶ ಟೆಂಟ್ ಮತ್ತು ಶಾಮಿಯಾನಾ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯ ಭಕ್ತರಿಗೆ ದೃಶ್ಯ ನೋಡಲು ದೇವಾಲಯದ ಹೊರಭಾಗದಲ್ಲಿ ದೊಡ್ಡ ಎಲ್.ಇ.ಡಿ ಸ್ಕ್ರೀನ್ ಅಳವಡಿಸಲಾಗಿತ್ತು. ಭದ್ರತೆ ಮತ್ತು ವ್ಯವಸ್ಥಿತ ನಿರ್ವಹಣೆಗಾಗಿ, ಈ ಸಮಯದಲ್ಲಿ ಗರ್ಭಗುಡಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.

ವೈಜ್ಞಾನಿಕ ಹಿನ್ನೆಲೆ: 

ಗವಿಗಂಗಾಧರೇಶ್ವರ ದೇವಾಲಯವು ಒಂದು ಖಗೋಳೀಯ ಅದ್ಭುತವಾಗಿ ನಿರ್ಮಾಣಗೊಂಡಿರುವ ಪುರಾತನ ವಾಸ್ತುಶಿಲ್ಪಕ್ಕೆ ನಿದರ್ಶನವಾಗಿದೆ. ದೇವಾಲಯದ ನಿರ್ಮಾಣಕಾರರಾದ ರಾಜಕುಮಾರ ಗವಿಯಪ್ಪ (ಗಂಗಾಧರೇಶ್ವರ) ದಂಡೇಶ ಅವರು, ಸಂಕ್ರಾಂತಿಯ ದಿನ ನಿರ್ದಿಷ್ಟ ಸಮಯದಲ್ಲಿ ಸೂರ್ಯರಶ್ಮಿ ದೇವಾಲಯದ ನಿರ್ದಿಷ್ಟ ಸ್ಥಳಗಳ ಮೂಲಕ ಹಾದು ಲಿಂಗವನ್ನು ಸ್ಪರ್ಶಿಸುವಂತೆ ನಿಖರವಾದ ಖಗೋಳಶಾಸ್ತ್ರೀಯ ಲೆಕ್ಕಾಚಾರದ ಮೇಲೆ ಇದನ್ನು ನಿರ್ಮಿಸಿದ್ದಾರೆ. ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಸೂರ್ಯನ ಪಥಬದಲಾವಣೆಯನ್ನು ಸೂಚಿಸುವ ಈ ದಿನ, ಈ ವಾಸ್ತು-ಖಗೋಳೀಯ ಸಂಭವವು ಪ್ರಕೃತಿಯ ನಿಯಮಗಳೊಂದಿಗೆ ಮಾನವನಿರ್ಮಿತ ನಿಖರತೆಯ ಅಪೂರ್ವ ಐಕ್ಯತೆಯನ್ನು ಸಾರುತ್ತದೆ.

 

Exit mobile version