ರಾಮನಗರ: ಐತಿಹಾಸಿಕ ಕರಗ ಮಹೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಷಣ ಆರಂಭಿಸುವ ವೇಳೆ ನಟ ದರ್ಶನ್ ಅಭಿಮಾನಿಗಳ ಘೋಷಣೆಗಳಿಂದ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ವೇದಿಕೆಯಲ್ಲಿ ಮುಖ್ಯಮಂತ್ರಿ ಮೈಕ್ ಹಿಡಿದು ಮಾತನಾಡಲು ಮುಂದಾಗುತ್ತಿದ್ದಂತೆಯೇ ಅಭಿಮಾನಿಗಳು ನಿರಂತರವಾಗಿ “ಡಿ ಬಾಸ್… ಡಿ ಬಾಸ್…” ಎಂದು ಘೋಷಣೆ ಕೂಗಲು ಆರಂಭಿಸಿದರು. ಇದರಿಂದ ಮುಖ್ಯಮಂತ್ರಿ ತಮ್ಮ ಭಾಷಣವನ್ನು ಕೆಲವು ಕ್ಷಣಗಳ ಕಾಲ ಸ್ಥಗಿತಗೊಳಿಸಿ ಪರಿಸ್ಥಿತಿಯನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಭಿಮಾನಿಗಳ ಘೋಷಣೆಗಳು ಹೆಚ್ಚಾಗುತ್ತಿದ್ದಂತೆ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಆಯೋಜಕರು ಜನರನ್ನು ಶಾಂತವಾಗಿರಲು ಮನವಿ ಮಾಡಿದರು. ಆದರೂ ಅಭಿಮಾನಿಗಳು ತಮ್ಮ ಘೋಷಣೆಗಳನ್ನು ಮುಂದುವರಿಸಿದ ಕಾರಣ, ಮುಖ್ಯಮಂತ್ರಿ ಹಲವು ಬಾರಿ ಕುರ್ಚಿಯಿಂದ ಎದ್ದು ಮತ್ತೆ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಯಿತು. ಇದೇ ವೇಳೆ ಪಟಾಕಿ ಸಿಡಿಸದಂತೆ ಕೂಡ ಅಭಿಮಾನಿಗಳಿಗೆ ಮನವಿ ಮಾಡಲಾಯಿತು.
ಸ್ವಲ್ಪ ಸಮಯದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಮುಖ್ಯಮಂತ್ರಿ ತಮ್ಮ ಭಾಷಣವನ್ನು ಪುನರಾರಂಭಿಸಿದರು. ಈ ವೇಳೆ ನಿರಂತರವಾಗಿ ಘೋಷಣೆ ಕೂಗುತ್ತಿದ್ದ ದರ್ಶನ್ ಅಭಿಮಾನಿಗಳಿಗೆ ಅವರು ಸಮಾಧಾನದ ಮಾತುಗಳನ್ನಾಡಿದರು.
“ಇದು ಪವಿತ್ರವಾದ ಸಭೆ. ನಿಮ್ಮ ಅಭಿಮಾನಕ್ಕೆ ನಾನು ಗೌರವ ಕೊಡುತ್ತೇನೆ. ಆದರೆ ಕೋರ್ಟ್ಗೆ ಸಂಬಂಧಿಸಿದ ವಿಚಾರಗಳನ್ನು ತಂದು ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಹೇರಬೇಡಿ. ನಿಮ್ಮ ಭಾವನೆ ನನಗೆ ಅರ್ಥವಾಗುತ್ತದೆ. ನಾನು ಇಲ್ಲಿ ನಿಮ್ಮ ಸೇವಕನಾಗಿ ಬಂದಿದ್ದೇನೆ. ನಾನು ಮುಖ್ಯಮಂತ್ರಿ ಆಗಿರಬಹುದು, ಆದರೆ ರಾಮನಗರ ಜಿಲ್ಲೆಯ ಮಗ ಕೂಡ ಹೌದು. ಈ ಜಿಲ್ಲೆಯ ಮಗನಾಗಿ ನನ್ನನ್ನು ನೀವು ಕಾಪಾಡಿಕೊಳ್ಳಬೇಕು,” ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.
“ನಾವು ಎಲ್ಲರೂ ಕಾನೂನು ಚೌಕಟ್ಟಿನಲ್ಲೇ ನಡೆದುಕೊಳ್ಳಬೇಕು. ಯಾವುದೇ ವಿಚಾರಕ್ಕೂ ಕಾನೂನಿನ ಪ್ರಕಾರವೇ ಪರಿಹಾರ ಸಿಗಬೇಕು. ನಾನು ದೇವರಲ್ಲಿ ಪ್ರಾರ್ಥನೆ ಮಾಡಿದಂತೆ ನೀವೂ ದೇವರಲ್ಲಿ ಪ್ರಾರ್ಥನೆ ಮಾಡಿ. ಪ್ರಯತ್ನ ಕೆಲವೊಮ್ಮೆ ವಿಫಲವಾಗಬಹುದು, ಆದರೆ ಪ್ರಾರ್ಥನೆ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ನಾನು ಈ ಹಿಂದೆ ಚಾಮುಂಡಿ ಬೆಟ್ಟದಲ್ಲಿ ಹೇಳಿದ್ದೆ. ನೀವು ಕೂಡ ಚಾಮುಂಡೇಶ್ವರಿಗೆ ಪ್ರಾರ್ಥನೆ ಮಾಡಿ. ತಾಯಿ ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಾಳೆ,” ಎಂದರು.
ಕರಗ ಮಹೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಇಂತಹ ಪವಿತ್ರ ಕಾರ್ಯಕ್ರಮಗಳಲ್ಲಿ ಶಾಂತಿ ಮತ್ತು ಶಿಸ್ತು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅಭಿಮಾನಿಗಳು ತಮ್ಮ ಅಭಿಮಾನವನ್ನು ವ್ಯಕ್ತಪಡಿಸುವುದು ಸಹಜವಾದರೂ, ಧಾರ್ಮಿಕ ಕಾರ್ಯಕ್ರಮಗಳ ಗೌರವ ಮತ್ತು ಕಾನೂನಿನ ಮಿತಿಯನ್ನು ಎಲ್ಲರೂ ಪಾಲಿಸಬೇಕೆಂದು ಅವರು ಕರೆ ನೀಡಿದರು.
