ಯತೀಂದ್ರ ಹೇಳಿಕೆ ಬಗ್ಗೆ ಸಿಎಂ ಉತ್ತರ ನೀಡ್ತಾರೆ: ಡಿಸಿಎಂ ಡಿ.ಕೆ.ಶಿವಕುಮಾರ್

Untitled design 2025 12 11T130756.376

ಬೆಳಗಾವಿ: ಡಿಸೆಂಬರ್ 11, 2025: ಬೆಳಗಾವಿಯ ಸುವರ್ಣ ವಿಧಾನಸೌಧ ಮತ್ತು ಸರ್ಕಿಟ್ ಹೌಸ್ ಬಳಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ರಾಜಕೀಯ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಹಲವು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿದರು. ವಿಶೇಷವಾಗಿ, ಮುಖ್ಯಮಂತ್ರಿ ಸ್ಥಾನ ಮತ್ತು ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಕೇಳಲಾದ ಪ್ರಶ್ನೆಗೆ ಡಿಸಿಎಂ ನೀಡಿದ ಉತ್ತರ ಸಾಕಷ್ಟು ಕುತೂಹಲ ಮೂಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಮತ್ತು ವಿಧಾನ ಪರಿಷತ್ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ ಅವರು, ಮುಂದಿನ ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾಯಕತ್ವದ ಕುರಿತಾದ ಈ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉತ್ತರ ನೀಡುತ್ತಾರೆ ಎಂದು ಹೇಳಿದ್ದಾರೆ.

ಇನ್ನೂ ವಿಧಾನಸಭೆಯಲ್ಲಿ ದ್ವೇಷ ಭಾಷಣದ ತಡೆ ವಿಧೇಯಕವನ್ನು ಮಂಡಿಸಲು ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಡಿಸಿಎಂ ಅವರನ್ನು ಪ್ರಶ್ನಿಸಿದಾಗ, ಈ ಬಿಜೆಪಿ ಪಕ್ಷದವರು ಜಾತಿ-ಜಾತಿಗಳ ಮಧ್ಯೆ, ಧರ್ಮ-ಧರ್ಮಗಳ ಮಧ್ಯೆ ದ್ವೇಷ ಬಿತ್ತುತ್ತಾರೆ. ಬಿಜೆಪಿಗರು ವೈಯಕ್ತಿಕ ನಿಂದನೆಗಳನ್ನು ಮಾಡುವ ದ್ವೇಷ ಭಾಷಣದ ಪಿತಾಮಹರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನದ ಆಶಯಗಳ ಪ್ರಕಾರ ಅವರು ನಡೆದುಕೊಳ್ಳಲಿ. ಸಂವಿಧಾನಕ್ಕೆ ಗೌರವ ಕೊಡುವ ಇಚ್ಛೆ ನಿಜವಾಗಿಯೂ ಅವರಿಗಿದ್ದರೆ, ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಿ. ದ್ವೇಷ ಭಾಷಣವನ್ನು ಮಾಡದೇ ಹೋದರೆ, ರಾಜ್ಯದಲ್ಲಿ ಯಾವುದೇ ಸಮಸ್ಯೆಯೇ ಇರುವುದಿಲ್ಲ. ಸಂವಿಧಾನದ ರಕ್ಷಣೆ ಮತ್ತು ಶಾಂತಿಯನ್ನು ಕಾಪಾಡಲು ನಾವು ಈ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ನೀಡಿದ ಹೇಳಿಕೆಯೊಂದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿ, ನೆಹರು ಮತ್ತು ಇಂದಿರಾ ಗಾಂಧಿ ಅವರ ಆಳ್ವಿಕೆಯ ಸಮಯದಲ್ಲಿ ‘ಮತ ಕಳ್ಳತನ’ (Vote Theft) ನಡೆದಿತ್ತು ಎಂಬ ಅಮಿತ್ ಶಾ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಡಿಕೆಎಸ್ ತಿರುಗೇಟು ನೀಡಿದರು.

ಅಮಿತ್ ಶಾ ಅವರು ಈ ವಿಷಯದ ಬಗ್ಗೆ ಕನಿಷ್ಟ ಜ್ಞಾನವನ್ನಾದರೂ ಹೊಂದಿರಬೇಕು. ಇಂದಿರಾ ಗಾಂಧಿ ಅವರ ಕಾಲದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರ (EVM) ಇರಲಿಲ್ಲ. ಆಗ ಕೇವಲ ಬ್ಯಾಲೆಟ್ ಪೇಪರ್‌ಗಳನ್ನು ಬಳಸಲಾಗುತ್ತಿತ್ತು. ಹೀಗಿರುವಾಗ, ಮತ ಕಳ್ಳತನ ಹೇಗೆ ಸಾಧ್ಯ ? ಅಂತಹ ಹೇಳಿಕೆ ನೀಡುವ ಮುನ್ನ ಅವರು ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಪ್ರಶ್ನಿಸಿದರು.

Exit mobile version