ಬೆಂಗಳೂರು, ಮೇ 28: ಕರ್ನಾಟಕದ ರಾಜಕೀಯದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯೊಂದು ನಡೆಯಲಿದೆ. ಕಾಂಗ್ರೆಸ್ ಹೈಕಮಾಂಡ್ನ ಸೂಚನೆಯಂತೆ, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಲಿದ್ದಾರೆ. ಇದರೊಂದಿಗೆ, ಮುಂದಿನ ನಾಯಕರಾಗಿ ಡಿ.ಕೆ. ಶಿವಕುಮಾರ್ ಅವರು ಜೂನ್ 1 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂದು ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.
ಇಂದು ಬೆಳಿಗ್ಗೆ ಮುಖ್ಯಮಂತ್ರಿ ನಿವಾಸ ‘ಕಾವೇರಿ’ಯಲ್ಲಿ ಮಹತ್ವದ ಬ್ರೇಕ್‌ಫಾಸ್ಟ್ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಸಚಿವ ಸಂಪುಟದ ಸದಸ್ಯರು ಭಾಗವಹಿಸಲಿದ್ದು, ತಮ್ಮ ರಾಜೀನಾಮೆ ತೀರ್ಮಾನವನ್ನು ಸಿದ್ದರಾಮಯ್ಯ ಅವರು ಅಧಿಕೃತವಾಗಿ ತಿಳಿಸಲಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ಒಳಗೆ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಜೋರಾಗಿದ್ದವು. ಇದೀಗ ಆ ಚರ್ಚೆಗೆ ಅಂತಿಮ ತೆರೆ ಬೀಳುವ ಹಂತಕ್ಕೆ ರಾಜಕೀಯ ಬೆಳವಣಿಗೆಗಳು ಬಂದಿವೆ.
ಸಭೆಯ ಬಳಿಕ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಭವನಕ್ಕೆ ಭೇಟಿ ನೀಡಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು ಸಹ ಉಪಸ್ಥಿತರಿರುವ ಸಾಧ್ಯತೆ ಇದೆ. ರಾಜ್ಯಪಾಲರ ಭೇಟಿ ನಂತರ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ನಾಯಕತ್ವ ಆಯ್ಕೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದೆ.
ಶುಕ್ರವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಹೊಸ ಶಾಸಕಾಂಗ ನಾಯಕನ ಆಯ್ಕೆ ನಡೆಯಲಿದೆ. ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರೇ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಶಾಸಕಾಂಗ ನಾಯಕನಾಗಿ ಪ್ರಸ್ತಾಪಿಸಲಿದ್ದಾರೆ. ಹಿರಿಯ ಶಾಸಕರು ಹಾಗೂ ಸಚಿವರಿಂದ ಆ ಪ್ರಸ್ತಾವನೆಗೆ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಹೆಚ್ಚಾಗಿದೆ.
ನೂತನ ನಾಯಕನ ಆಯ್ಕೆ ಬಳಿಕ ಸಿದ್ದರಾಮಯ್ಯ ಅವರು ಶಾಸಕರು ಹಾಗೂ ಪಕ್ಷದ ನಾಯಕರಿಗೆ ಧನ್ಯವಾದ ಸಲ್ಲಿಸಲಿದ್ದಾರೆ. ಮತ್ತೊಂದೆಡೆ, ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ರಾಜಕೀಯ ಅನುಭವ ಮತ್ತು ಆಡಳಿತಕ್ಕೆ ಗೌರವ ಸಲ್ಲಿಸುವ ಕಾರ್ಯಕ್ರಮವೂ ನಡೆಯುವ ಸಾಧ್ಯತೆ ಇದೆ.
ಇದೇ ವೇಳೆ, ಡಿ.ಕೆ. ಶಿವಕುಮಾರ್ ಅವರು ಇಂದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ರಾಜ್ಯ ಕಾಂಗ್ರೆಸ್ ಸಂಘಟನೆಯನ್ನು ಬಲಿಷ್ಠಗೊಳಿಸಿದ್ದ ಡಿಕೆಶಿ ಈಗ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. ಹೈಕಮಾಂಡ್ ಕೂಡ ಈ ಬದಲಾವಣೆಗೆ ಅಂತಿಮ ಒಪ್ಪಿಗೆ ನೀಡಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಜೂನ್ 1ರಂದು ಶುಭ ಮುಹೂರ್ತ ಇರುವ ಹಿನ್ನೆಲೆ ಅದೇ ದಿನ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಪ್ರಮಾಣವಚನಕ್ಕೂ ಮುನ್ನ ಅವರು ತುಮಕೂರಿನ ನೊಣವಿನಕೆರೆಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಅಜ್ಜಯ್ಯನ ಪೀಠಕ್ಕೆ ತೆರಳಿ ಗದ್ದುಗೆ ದರ್ಶನ ಪಡೆದು ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ಶುಭ ಸಮಯದಲ್ಲಿ ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.





