ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಸಂಜೆ 4:05ಕ್ಕೆ ಲೋಕಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಅವರ ಜೊತೆಗೆ 13 ಮಂದಿ ಶಾಸಕರು ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ. ಒಟ್ಟು 14 ಸದಸ್ಯರ ಸಂಪುಟವಾಗಿ ಇಂದು ಅಧಿಕಾರ ಸ್ವೀಕರಿಸುತ್ತಿದ್ದಾರೆ.
ಈ ಸಂಪುಟದಲ್ಲಿ ಡಾ. ಜಿ. ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿ (ಡಿಸಿಎಂ) ಹುದ್ದೆಯನ್ನು ಪಡೆಯುವುದು ಖಚಿತವಾಗಿದೆ. ಇದು ಡಿ.ಕೆ.ಶಿವಕುಮಾರ್ ಅವರ ನಾಯಕತ್ವದಲ್ಲಿ ಮೊದಲ ಸಂಪುಟವಾಗಿದ್ದು, ಜಾತಿ ಸಮೀಕರಣ, ಪ್ರದೇಶೀಯ ಪ್ರಾತಿನಿಧ್ಯ ಮತ್ತು ಹಿರಿಯ-ಯುವ ನಾಯಕರ ಸಮತೋಲನವನ್ನು ಕಾಯ್ದುಕೊಳ್ಳುವ ಪ್ರಯತ್ನ ಕಂಡುಬಂದಿದೆ.
ಪ್ರಮಾಣ ವಚನ ಸ್ವೀಕರಿಸಲಿರುವ ಸಚಿವರು:
- ಡಿ.ಕೆ. ಶಿವಕುಮಾರ್ – ಮುಖ್ಯಮಂತ್ರಿ
- ಡಾ. ಜಿ. ಪರಮೇಶ್ವರ್ – ಉಪ ಮುಖ್ಯಮಂತ್ರಿ
- ಎಂ.ಬಿ. ಪಾಟೀಲ್
- ಕೆ.ಜೆ. ಜಾರ್ಜ್
- ಕೆ.ಎಚ್. ಮುನಿಯಪ್ಪ
- ರಾಮಲಿಂಗಾರೆಡ್ಡಿ
- ಸತೀಶ್ ಜಾರಕಿಹೊಳಿ
- ಯು.ಟಿ. ಖಾದರ್
- ಕೃಷ್ಣ ಬೈರೇಗೌಡ
- ಪ್ರಿಯಾಂಕ್ ಖರ್ಗೆ
- ಯತೀಂದ್ರ ಸಿದ್ದರಾಮಯ್ಯ
- ಬೈರತಿ ಸುರೇಶ್
- ಡಾ. ಶರಣ ಪ್ರಕಾಶ್ ಪಾಟೀಲ್
- ಈಶ್ವರ್ ಖಂಡ್ರೆ
ಈ ಪಟ್ಟಿಯಲ್ಲಿ ಹಿರಿಯ ನಾಯಕರಾದ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಕೆ.ಎಚ್. ಮುನಿಯಪ್ಪ ಮತ್ತು ಯು.ಟಿ. ಖಾದರ್ ಅವರುಗಳಿದ್ದಾರೆ. ಯುವಕರ ಪ್ರತಿನಿಧಿಯಾಗಿ ಪ್ರಿಯಾಂಕ್ ಖರ್ಗೆ ಮತ್ತು ಯತೀಂದ್ರ ಸಿದ್ದರಾಮಯ್ಯ ಅವರುಗಳು ಸ್ಥಾನ ಪಡೆದಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಸೇರ್ಪಡೆಯು ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡುವ ಸಂದೇಶವನ್ನು ನೀಡುತ್ತಿದೆ.
ಡಿ.ಕೆ.ಶಿವಕುಮಾರ್ ಅವರು ಸಣ್ಣ ಮತ್ತು ಪರಿಣಾಮಕಾರಿ ಸಂಪುಟವನ್ನು ರಚಿಸುವ ತಂತ್ರ ಅನುಸರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮೊದಲ ಹಂತದಲ್ಲಿ 14 ಸದಸ್ಯರ ಸಂಪುಟ ರಚನೆಯಾಗುತ್ತಿದ್ದು, ನಂತರ ಹಂತಹಂತವಾಗಿ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂಬುದು ತಿಳಿದುಬಂದಿದೆ.
ಇಂದಿನ ಪ್ರಮಾಣವಚನ ಸಮಾರಂಭವು ಲೋಕಭವನದಲ್ಲಿ ನಡೆಯಲಿದ್ದು, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಮತ್ತು ಸರ್ವಧರ್ಮ ಸ್ವಾಮೀಜಿಗಳು ಉಪಸ್ಥಿತರಿರುವರು. ಸಮಾರಂಭದ ಬಳಿಕ ಡಿ.ಕೆ.ಶಿವಕುಮಾರ್ ಅವರು ಸಚಿವರ ಜೊತೆಗೆ ಕಾಲ್ನಡಿಗೆಯಲ್ಲಿ ವಿಧಾನಸೌಧಕ್ಕೆ ಮೆರವಣಿಗೆ ನಡೆಸುವ ಸಾಧ್ಯತೆಯಿದೆ.
ಈ ಸಂಪುಟ ರಚನೆಯು ಡಿ.ಕೆ.ಶಿವಕುಮಾರ್ ಅವರ ನಾಯಕತ್ವದಲ್ಲಿ ಕರ್ನಾಟಕ ಕಾಂಗ್ರೆಸ್‌ನಲ್ಲಿ ಹೊಸ ಅಧ್ಯಾಯ ಆರಂಭಿಸುವುದು ಎಂದು ಪಕ್ಷದ ಕಾರ್ಯಕರ್ತರು ನಿರೀಕ್ಷಿಸುತ್ತಿದ್ದಾರೆ.