ಧರ್ಮಸ್ಥಳ ಪ್ರಕರಣ: ತನ್ನ ಮೇಲಿನ ಆರೋಪಗಳ ಬಗ್ಗೆ ನಟ ಪ್ರಕಾಶ್ ರಾಜ್ ಸ್ಪಷ್ಟನೆ

ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ನಟ ಪ್ರಕಾಶ್ ರಾಜ್ ಅವರ ಹೆಸರು ಉಲ್ಲೇಖವಾಗಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ  ಪ್ರಕಾಶ್​ ರಾಜ್ ಇಂದು​ ಸುದ್ದಿಗೋಷ್ಠಿ ನಡೆಸಿದ್ದಾರೆ.

ಎಕ್ಸ್ ನಲ್ಲಿ ಪ್ರಕಾಶ್ ರಾಜ್ ಅವರು ಇತ್ತೀಚೆಗೆ ಕೆಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ, ಧರ್ಮಸ್ಥಳ ಪ್ರಕರಣ ಹಾಗೂ ಚಿನ್ನಯ್ಯ ಎಂಬ ವ್ಯಕ್ತಿಯ ಹೇಳಿಕೆಯ ಹಿನ್ನೆಲೆಯಲ್ಲಿ ತಮ್ಮ ಬಗ್ಗೆ ಕೆಲವೊಂದು ಸುದ್ದಿ ಮತ್ತು ಚರ್ಚೆಗಳು ಹರಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ. ಈ ಪ್ರಕರಣವು ಅತ್ಯಂತ ಸೂಕ್ಷ್ಮವಾದ ವಿಷಯವಾಗಿದ್ದು, ಕೋಟ್ಯಂತರ ಭಕ್ತರ ನಂಬಿಕೆಗೆ ಸಂಬಂಧಿಸಿದೆ ಎಂಬುದನ್ನು ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದರು. ಇದೀಗ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ತಮ್ಮನ್ನು ಕೆಲವರು ತಪ್ಪಾಗಿ ಉಲ್ಲೇಖಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್‌ನಲ್ಲಿ ಯಾವುದೇ ಮಾಧ್ಯಮ ಸಂಸ್ಥೆಗಳನ್ನು ನೇರವಾಗಿ “ಮಾರಿಕೊಂಡ ಮಾಧ್ಯಮಗಳು” ಎಂದು ಹೇಳಿಲ್ಲ. ಆದರೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕೆಲವು ವಿಷಯಗಳನ್ನು ತಿರುಚಲಾಗುತ್ತಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕೆಲವು ಮಾಧ್ಯಮಗಳು ವಿಷಯವನ್ನು ಪೂರ್ಣವಾಗಿ ಪರಿಶೀಲಿಸದೇ ತೀರ್ಪು ನೀಡುತ್ತಿರುವಂತೆ ವರ್ತಿಸುತ್ತಿವೆ ಎಂದರು.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವು ಸ್ಪಷ್ಟಪಡಿಸಿರುವ ಅವರು, ತಾವು ಯಾವ ಧರ್ಮದ ವಿರುದ್ಧವೂ ಅಲ್ಲ, ಬದಲಾಗಿ ಅನ್ಯಾಯದ ವಿರುದ್ಧ ಮಾತ್ರ ಧ್ವನಿ ಎತ್ತುತ್ತೇನೆ. ಸೌಜನ್ಯ ಕೊಲೆ ಪ್ರಕರಣ ಸೇರಿದಂತೆ ಧರ್ಮಸ್ಥಳದ ಸುತ್ತ ನಡೆದಿರುವ ಅಸಹಜ ಸಾವುಗಳ ಬಗ್ಗೆ ನ್ಯಾಯಾಂಗ ಹಾಗೂ ತನಿಖಾ ಸಂಸ್ಥೆಗಳು ಸಮಗ್ರವಾಗಿ ಪರಿಶೀಲಿಸಬೇಕು ಎಂಬುದು ನನ್ನ ಉದ್ದೇಶ ಎಂದಿದ್ದಾರೆ.  ದೂರವಾಣಿ ಸಂಭಾಷಣೆ ಹಾಗೂ ಆರೋಪಗಳ ಕುರಿತು ಮಾತನಾಡಿದ ಅವರು, ಗಿರೀಶ್ ಮಟ್ಟಣ್ಣನವರ್ ಮೂಲಕ ಸಂಪರ್ಕ ಬಂದಿದ್ದು, ಒಬ್ಬ ವ್ಯಕ್ತಿ ತಮಿಳಿನಲ್ಲಿ ಮಾತನಾಡಿ ಭೇಟಿ ಮಾಡಲು ಹೇಳಿದ್ದಾನೆ. ಆ ಸಂಭಾಷಣೆಯನ್ನು ದಾಖಲಿಸಿ ಸಂಬಂಧಿತ ಅಧಿಕಾರಿಗಳಿಗೆ ಹಂಚಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ಕೆಲ ದಿನಗಳ ಬಳಿಕ ಆ ವ್ಯಕ್ತಿಯ ಹೇಳಿಕೆಗಳಲ್ಲಿ ಬದಲಾವಣೆ ಕಂಡುಬಂದಿದ್ದು, ಇನ್ನು ಮುಂದೆ ಆ ರೀತಿಯ ಕರೆಗಳನ್ನು ಸ್ವೀಕರಿಸಬೇಡಿ ಎಂದು ತನಿಖಾಧಿಕಾರಿಗಳು ಸಲಹೆ ನೀಡಿದರೆಂದು ಅವರು ತಿಳಿಸಿದ್ದಾರೆ. ತಪ್ಪು ಮಾಹಿತಿ ನೀಡಿರುವ ವ್ಯಕ್ತಿಯ ವಿರುದ್ಧವೂ ಕ್ರಮವಾಗಬೇಕು ಎಂಬುದು ತಮ್ಮ ನಿಲುವು ಎಂದು ಹೇಳಿದ್ದಾರೆ.

“200 ಕೋಟಿ ಹಣ ಪಡೆದಿದ್ದಾರೆ” ಎಂಬ ಆರೋಪವನ್ನು ಸಂಪೂರ್ಣವಾಗಿ ತಳ್ಳಿ ಹಾಕಿರುವ ಅವರು, ತಾವು ಯಾವುದೇ ಹಣಕಾಸು ಲಾಭಕ್ಕಾಗಿ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನನ್ನ ಹೋರಾಟವು ರಾಜಕೀಯ ಅಥವಾ ಧಾರ್ಮಿಕ ಉದ್ದೇಶದಿಂದ ಅಲ್ಲ, ನ್ಯಾಯಕ್ಕಾಗಿ ಮಾತ್ರ ಎಂದು ಅವರು ಪುನರುಚ್ಚರಿಸಿದ್ದಾರೆ.

Exit mobile version