ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯ ಅನುಮತಿ ನೀಡಿದೆ. ಇಂದು ಪ್ರದೋಷ್ ಸಲ್ಲಿಸಿದ್ದ ಮಾಫಿ ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್, ಆತನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಪ್ರಕ್ರಿಯೆಗೆ ಮುಂದುವರಿಯಲು ಅವಕಾಶ ನೀಡಿದೆ.
ಪ್ರದೋಷ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿದ್ದ ಅರ್ಜಿಯನ್ನು ಪ್ರಾಸಿಕ್ಯೂಷನ್ ಪರ ವಕೀಲರು ಸ್ವೀಕರಿಸಬೇಕು ಎಂದು ವಾದಿಸಿದ್ದರು. ಆದರೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರದೋಷ್‌ನ ಮಾಫಿ ಅರ್ಜಿಯನ್ನು ಸ್ವೀಕರಿಸಬಾರದು ಎಂದು ಅವರು ನ್ಯಾಯಾಲಯದಲ್ಲಿ ವಾದಿಸಿದ್ದರು. ಇದೀಗ ನ್ಯಾಯಾಲಯ ಪ್ರದೋಷ್ ಅವರ ಅರ್ಜಿಯನ್ನು ಪುರಸ್ಕರಿಸಿರುವುದು ದರ್ಶನ್ ಪರ ವಾದಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.
ಮಾಫಿ ಸಾಕ್ಷಿಯಾಗಲು ಅವಕಾಶ ದೊರೆತಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಮತ್ತು ಮುಂದಿನ ವಿಚಾರಣೆಯಲ್ಲಿ ಪ್ರದೋಷ್ ನೀಡಲಿರುವ ಹೇಳಿಕೆಗಳು ಪ್ರಮುಖವಾಗುವ ಸಾಧ್ಯತೆಯಿದೆ. ಪ್ರಕರಣದಲ್ಲಿ ನಡೆದಿರುವ ಘಟನೆಗಳು, ಆರೋಪಿಗಳ ನಡುವಿನ ಸಂಪರ್ಕ, ಕೃತ್ಯದ ನಂತರ ನಡೆದ ಬೆಳವಣಿಗೆಗಳು ಹಾಗೂ ಹಣಕಾಸಿನ ವ್ಯವಹಾರಗಳ ಕುರಿತು ಪ್ರದೋಷ್ ನೀಡುವ ಮಾಹಿತಿಯು ತನಿಖೆಗೆ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ. ಇದೇ ವೇಳೆ, ಅವರ ಹೇಳಿಕೆ ದರ್ಶನ್ ಪರ ವಾದದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಪ್ರದೋಷ್ ಪಾತ್ರವೇನು?
ಗಿರಿನಗರದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ ಪ್ರದೋಷ್, ಇತ್ತೀಚಿನ ವರ್ಷಗಳಲ್ಲಿ ನಟ ದರ್ಶನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಪ್ರದೋಷ್, ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಸಿನಿಮಾ ಕ್ಷೇತ್ರದಲ್ಲಿ ಅಭಿನಯಿಸುವ ಆಸಕ್ತಿಯೂ ಅವರಿಗಿತ್ತು. ಇದೇ ಆಸಕ್ತಿಯ ಮೂಲಕ ಅವರು ದರ್ಶನ್ ಅವರ ಸಂಪರ್ಕಕ್ಕೆ ಬಂದಿದ್ದರು.
ದರ್ಶನ್ ಅಭಿನಯದ ‘ಬೃಂದಾವನ’, ‘ಬುಲ್‌ಬುಲ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರದೋಷ್ ಅಭಿನಯಿಸಿದ್ದರು. ಹೀಗಾಗಿ ದರ್ಶನ್ ಅವರ ಆಪ್ತ ಬಳಗದಲ್ಲಿ ಪ್ರದೋಷ್ ಗುರುತಿಸಿಕೊಂಡಿದ್ದರು ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ. ಪ್ರಕರಣ ಬೆಳಕಿಗೆ ಬಂದ ಬಳಿಕ ದರ್ಶನ್ ಅವರನ್ನು ಈ ಪ್ರಕರಣದಿಂದ ಪಾರು ಮಾಡಲು ಪ್ರದೋಷ್ ಪ್ರಯತ್ನಿಸಿದ್ದಾನೆ ಎಂಬ ಆರೋಪವೂ ಇದೆ.
ಪ್ರಕರಣದಲ್ಲಿ ತನ್ನ ಹೆಸರು ಹೊರಬಾರದಂತೆ ನೋಡಿಕೊಳ್ಳಲು ದರ್ಶನ್ ಅವರು ಪ್ರದೋಷ್‌ಗೆ ₹30 ಲಕ್ಷ ಹಣ ನೀಡಿದ್ದರು ಎಂಬ ಆರೋಪ ತನಿಖೆಯಲ್ಲಿ ಕೇಳಿಬಂದಿತ್ತು. ಬಳಿಕ ಪೊಲೀಸರು ಪ್ರದೋಷ್ ನಿವಾಸದಲ್ಲಿ ಇರಿಸಲಾಗಿದ್ದ ₹30 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದರು. ಈ ಹಣದ ಕುರಿತು ತನಿಖಾಧಿಕಾರಿಗಳು ನ್ಯಾಯಾಲಯಕ್ಕೂ ಮಾಹಿತಿ ಸಲ್ಲಿಸಿದ್ದಾರೆ.
ಇದೀಗ ಪ್ರದೋಷ್ ಮಾಫಿ ಸಾಕ್ಷಿಯಾಗಲು ನ್ಯಾಯಾಲಯದಿಂದ ಅನುಮತಿ ದೊರೆತಿರುವುದರಿಂದ, ಅವರು ಮುಂದಿನ ಹಂತದಲ್ಲಿ ನೀಡುವ ಹೇಳಿಕೆಗಳು ಪ್ರಕರಣದ ದಿಕ್ಕನ್ನೇ ಬದಲಿಸುವ ಸಾಧ್ಯತೆಯಿದೆ. ವಿಶೇಷವಾಗಿ ಕೃತ್ಯದ ಮುನ್ನ ಮತ್ತು ನಂತರ ನಡೆದ ಬೆಳವಣಿಗೆಗಳ ಕುರಿತು ಅವರ ಹೇಳಿಕೆಗಳು ಪ್ರಕರಣದಲ್ಲಿ ನಿರ್ಣಾಯಕವಾಗುವ ನಿರೀಕ್ಷೆಯಿದೆ.
