ಬೆಂಗಳೂರು (ಜುಲೈ 10): ಕರ್ನಾಟಕ ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಕರಾವಳಿ ಕರ್ನಾಟಕದ ಹಲವು ಭಾಗಗಳಲ್ಲಿ ವ್ಯಾಪಕ ವರ್ಷಧಾರೆಯ ಮುನ್ಸೂಚನೆ ನೀಡಲಾಗಿದೆ.
ಹವಾಮಾನ ಇಲಾಖೆ ಪ್ರಕಾರ, ಜುಲೈ 12ರಿಂದ ರಾಜ್ಯದಲ್ಲಿ ಮಳೆಯ ತೀವ್ರತೆ ಸ್ವಲ್ಪ ತಗ್ಗುವ ಸಾಧ್ಯತೆ ಇದೆ. ಆದರೂ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಒಂದು ಅಥವಾ ಎರಡು ಪ್ರದೇಶಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಇನ್ನು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗಬಹುದು. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳಲ್ಲೂ ಗಾಳಿಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ. ವಿಶೇಷವಾಗಿ ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಬಿರುಗಾಳಿಯ ಸ್ವರೂಪದ ಗಾಳಿ ಬೀಸುವ ಎಚ್ಚರಿಕೆ ನೀಡಲಾಗಿದೆ.
ರಾಜ್ಯದ ಹಲವು ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ. ಚಿಕ್ಕಮಗಳೂರಿನ ಕಳಸದ ತೋಟದೂರಿನಲ್ಲಿ ರಾಜ್ಯದಲ್ಲೇ ಅತ್ಯಧಿಕ 82 ಮಿ.ಮೀ. ಮಳೆಯಾಗಿದೆ. ದಕ್ಷಿಣ ಕನ್ನಡದ ಪುತ್ತೂರಿನ ನೆಲ್ಯಾಡಿಯಲ್ಲಿ 75.5 ಮಿ.ಮೀ., ಹಾಸನದ ಸಕಲೇಶಪುರದ ಹೊಗದಹಳ್ಳದಲ್ಲಿ 71.5 ಮಿ.ಮೀ., ಕೊಡಗಿನ ವಿರಾಜಪೇಟೆಯ ಬಿರುನಾನಿಯಲ್ಲಿ 71 ಮಿ.ಮೀ. ಮಳೆಯಾಗಿದೆ.
ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ 50 ಮಿ.ಮೀ., ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನಗರಬಸ್ತಿಕೇರಿಯಲ್ಲಿ 43 ಮಿ.ಮೀ., ಉಡುಪಿಯ ಕುಂದಾಪುರದ ಹೊಸಂಗಡಿಯಲ್ಲಿ 38 ಮಿ.ಮೀ., ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯ ಕೋರಮಂಗಲದಲ್ಲಿ 36 ಮಿ.ಮೀ. ಮಳೆಯಾಗಿದೆ.
ಹವಾಮಾನ ಇಲಾಖೆ ಎಚ್ಚರಿಕೆ ಹಿನ್ನೆಲೆ, ಮಳೆ ಹಾಗೂ ಗಾಳಿ ಹೆಚ್ಚಿರುವ ಪ್ರದೇಶಗಳಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ. ವಿಶೇಷವಾಗಿ ಮಿಂಚು-ಗುಡುಗು ಸಂದರ್ಭಗಳಲ್ಲಿ ಮರಗಳ ಕೆಳಗೆ ನಿಲ್ಲುವುದು, ವಿದ್ಯುತ್ ಕಂಬಗಳ ಸಮೀಪ ತೆರಳುವುದು ಹಾಗೂ ಅನಗತ್ಯವಾಗಿ ಹೊರ ಸಂಚಾರ ಮಾಡುವುದು ತಪ್ಪಿಸಲು ಇಲಾಖೆ ಸಲಹೆ ನೀಡಿದೆ.
