ಬಳ್ಳಾರಿ ಗಲಭೆ: ಜಮೀರ್ ಅಹ್ಮದ್ ಮತ್ತು ಭರತ್ ರೆಡ್ಡಿ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..!

Untitled design 2026 01 03T223205.713

ಬಳ್ಳಾರಿ: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಭೀಕರ ಗಲಭೆ ಹಾಗೂ ಗುಂಡಿನ ದಾಳಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಮಹತ್ವದ ತುರ್ತು ಸಭೆ ನಡೆಸಿದರು. ಜಿಲ್ಲೆಯ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸಿಎಂ, ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಸಮಗ್ರ ವರದಿ ಪಡೆದರು.

ಜಿಲ್ಲಾ ನಾಯಕರಿಂದ ಮಾಹಿತಿ:

ಸಿಎಂ ಸಿದ್ದರಾಮಯ್ಯ ಅವರು ತೋರಣಗಲ್‌ನ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಅವರು ಸಿಎಂ ಅವರನ್ನು ಭೇಟಿಯಾದರು. ನಗರದಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಆರಂಭವಾದ ಗಲಾಟೆ ಹೇಗೆ ವಿಕೋಪಕ್ಕೆ ತಿರುಗಿತು ಮತ್ತು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ ಘಟನೆಯ ನಂತರದ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರವಾಗಿ ಮನವರಿಕೆ ಮಾಡಿಕೊಟ್ಟರು.

ಅಧಿಕಾರಿಗಳೊಂದಿಗೆ ಸಮಾಲೋಚನೆ:

ಕೇವಲ ರಾಜಕೀಯ ನಾಯಕರಿಂದ ಮಾತ್ರವಲ್ಲದೆ, ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಂದಲೂ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದರು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ, ಬಳ್ಳಾರಿ ವಲಯದ ಐಜಿ ವರ್ತಿಕಾ ಕಟಿಯಾರ್ ಹಾಗೂ ದಾವಣಗೆರೆ ವಲಯದ ಐಜಿ ರವಿಕಾಂತೇಗೌಡ ಅವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ರಾಜಶೇಖರ್ ಸಾವಿಗೆ ಕಾರಣವಾದ ಗುಂಡಿನ ದಾಳಿ ನಡೆದಿದ್ದು ಹೇಗೆ ಮತ್ತು ಅದರಲ್ಲಿ ಭಾಗಿಯಾದವರು ಯಾರು ? ಎಂಬುದರ ಜೊತೆಗೆ ಬಳ್ಳಾರಿ ಎಸ್‌ಪಿಯವರನ್ನು ಅಮಾನತು ಮಾಡಿದ ನಂತರದ ಪೊಲೀಸ್ ಇಲಾಖೆಯ ಮುಂದಿನ ಕ್ರಮಗಳೇನು, ನಗರದಲ್ಲಿ ಮತ್ತೆ ಗಲಭೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಂಡಿರುವ ಪೊಲೀಸ್ ಬಂದೋಬಸ್ತ್ ಹೇಗಿದೆ ಎಂಬುದರ ಬಗ್ಗೆ ಕೂಲಂಕುಶವಾಗಿ ಮಾಹಿತಿ ಪಡೆದರು.

ತನಿಖೆಗೆ ಸಿಎಂ ಖಡಕ್ ಸೂಚನೆ:

ಅಧಿಕಾರಿಗಳ ವಿವರಣೆಯನ್ನು ಆಲಿಸಿದ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಳ್ಳಾರಿ ಪ್ರಕರಣದಲ್ಲಿ ಯಾವುದೇ ಪ್ರಭಾವಕ್ಕೆ ಒಳಗಾಗದೆ ಪಾರದರ್ಶಕವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥರು ಎಷ್ಟೇ ಪ್ರಭಾವಿಯಾಗಿದ್ದರೂ ಅವರನ್ನು ಕಾನೂನಿನ ಮುಂದೆ ತರಬೇಕು ಎಂದು ಸೂಚಿಸಿದರು. ಶಾಂತಿ ಕದಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆಜ್ಞೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರ ಮುಂದಿನ ಕ್ರಮ ಎಂಬುದನ್ನ ಕಾದು ನೋಡಬೇಕಿದೆ.

Exit mobile version