ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ (89) ಅವರು ಶನಿವಾರ ಸಂಜೆ ನಿಧನರಾದರು. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆನ್ನಮ್ಮ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಂಜೆ ಸುಮಾರು 4.30ರ ವೇಳೆಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಹಾಸನ ಜಿಲ್ಲೆಯ ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿ ಗ್ರಾಮದವರಾದ ಚೆನ್ನಮ್ಮ ಅವರು 1954ರ ಮೇ 25ರಂದು ಹೆಚ್.ಡಿ. ದೇವೇಗೌಡ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸುಮಾರು ಏಳು ದಶಕಗಳ ದಾಂಪತ್ಯ ಜೀವನದಲ್ಲಿ ದೇವೇಗೌಡರ ರಾಜಕೀಯ ಪಯಣದ ಏಳುಬೀಳುಗಳಿಗೆ ಮೌನವಾಗಿ ಬೆನ್ನೆಲುಬಾಗಿ ನಿಂತಿದ್ದರು. ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾ ದೇವೇಗೌಡರ ಸಾರ್ವಜನಿಕ ಜೀವನಕ್ಕೆ ಸದಾ ಬೆಂಬಲ ನೀಡಿದ ವ್ಯಕ್ತಿತ್ವ ಅವರದ್ದಾಗಿತ್ತು. ದಂಪತಿಗೆ ಆರು ಮಂದಿ ಮಕ್ಕಳಿದ್ದಾರೆ.
ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಭಾನುವಾರ ಬೆಳಿಗ್ಗೆ ದೇವೇಗೌಡರ ಹುಟ್ಟೂರು ಹಾಸನ ಜಿಲ್ಲೆಯ ಹರದನಹಳ್ಳಿಗೆ ಕೊಂಡೊಯ್ಯಲಾಗುತ್ತದೆ. ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಸಂಜೆ ಒಕ್ಕಲಿಗ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕುಟುಂಬಸ್ಥರು, ರಾಜಕೀಯ ನಾಯಕರು ಹಾಗೂ ಸಾವಿರಾರು ಅಭಿಮಾನಿಗಳು ಅಂತಿಮ ನಮನ ಸಲ್ಲಿಸುವ ನಿರೀಕ್ಷೆಯಿದೆ.
ಅಜ್ಜಿಯ ನಿಧನಕ್ಕೆ ಮೊಮ್ಮಗ ಹಾಗೂ ನಟ-ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಭಾವನಾತ್ಮಕವಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ. “ನಮ್ಮ ಹೆಮ್ಮೆಯ ಅಜ್ಜಿ, ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡ ಸಾಹೇಬರ ಧರ್ಮಪತ್ನಿ ಚೆನ್ನಮ್ಮ ಅವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಅಗಲಿಕೆ ನಮ್ಮ ಕುಟುಂಬಕ್ಕೆ ಎಂದಿಗೂ ತುಂಬಲಾಗದ ನಷ್ಟವಾಗಿದೆ” ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನೂ ತಮ್ಮ ಅಜ್ಜಿಯ ವ್ಯಕ್ತಿತ್ವವನ್ನು ಸ್ಮರಿಸಿದ ನಿಖಿಲ್, “ಅವರು ಕೇವಲ ನಮ್ಮ ಕುಟುಂಬದ ಹಿರಿಯರಷ್ಟೇ ಅಲ್ಲ, ಇಡೀ ಕುಟುಂಬವನ್ನು ಒಗ್ಗೂಡಿಸಿ ನಿಲ್ಲಿಸಿದ್ದ ಆಧಾರಸ್ತಂಭವಾಗಿದ್ದರು. ಮನೆಗೆ ಬಂದ ಯಾರನ್ನೂ ಹಸಿದ ಹೊಟ್ಟೆಯಲ್ಲಿ ಕಳುಹಿಸದ ಅವರ ಆತಿಥ್ಯ, ಪ್ರೀತಿ ಮತ್ತು ಮಮತೆ ಎಲ್ಲರಿಗೂ ಮಾದರಿಯಾಗಿತ್ತು. ಅವರ ಕೈಯಲ್ಲಿ ಬಡಿಸಿದ ಊಟ ಅನ್ನಪೂರ್ಣೇಶ್ವರಿಯ ಕೃಪೆಯಂತಿತ್ತು. ಸರಳತೆ, ಪ್ರೀತಿ ಮತ್ತು ಬದುಕಿನ ಮೌಲ್ಯಗಳನ್ನು ಅವರು ನಮಗೆ ಕಲಿಸಿಕೊಟ್ಟಿದ್ದಾರೆ. ಅವರ ನೆನಪುಗಳು ಸದಾ ನಮ್ಮೊಂದಿಗೇ ಇರುತ್ತವೆ” ಎಂದು ಕಂಬನಿ ಮಿಡಿದಿದ್ದಾರೆ.
ಚೆನ್ನಮ್ಮ ಅವರ ಅಗಲಿಕೆ ದೇವೇಗೌಡರ ಕುಟುಂಬಕ್ಕೆ ಮಾತ್ರವಲ್ಲ, ಅವರ ಸರಳತೆ ಮತ್ತು ಮಾನವೀಯ ಗುಣಗಳನ್ನು ಹತ್ತಿರದಿಂದ ಕಂಡ ಅನೇಕರಿಗೆ ಅಪಾರ ನೋವುಂಟು ಮಾಡಿದೆ.
