ಬೆಂಗಳೂರು, ಆ.24: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 9,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೂಚಿಸಿದೆ.
ನವದೆಹಲಿಯಲ್ಲಿ ಇಂದು ಸೋಮವಾರ ನಡೆದ CWRCಯ 141ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಮಿತಿಯ ಸೂಚನೆಯಂತೆ ಆಗಸ್ಟ್ 25ರ ಬೆಳಗ್ಗೆ 8 ಗಂಟೆಯಿಂದ ನೀರು ಹರಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಅಂತಾರಾಜ್ಯ ಗಡಿಯಲ್ಲಿರುವ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಪ್ರತಿದಿನ 9,000 ಕ್ಯೂಸೆಕ್ ನೀರಿನ ಹರಿವು ಖಚಿತಪಡಿಸಬೇಕು. ಮುಂದಿನ 15 ದಿನಗಳಲ್ಲಿ ಒಟ್ಟು ಸುಮಾರು 11.66 ಟಿಎಂಸಿ ನೀರು ಬಿಳಿಗುಂಡ್ಲುವಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಕರ್ನಾಟಕದ ವಾದವೇನು?
ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ರಾಜ್ಯದ ಜಲಾಶಯಗಳಲ್ಲಿನ ನೀರಿನ ಒಳಹರಿವು ಗಣನೀಯವಾಗಿ ಕುಸಿದಿರುವುದನ್ನು ಸಮಿತಿಯ ಗಮನಕ್ಕೆ ತಂದರು. ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದರೆ ಕಾವೇರಿ ಜಲಾನಯನ ಪ್ರದೇಶದ ಒಳಹರಿವಿನಲ್ಲಿ ಶೇ.49.18ರಷ್ಟು ಇಳಿಕೆಯಾಗಿದೆ ಎಂದು ರಾಜ್ಯ ಸರ್ಕಾರ ವಾದಿಸಿದೆ.
ಜುಲೈ 29 ರಿಂದ ಆಗಸ್ಟ್ 23 ರವರೆಗೆ ಬಿಳಿಗುಂಡ್ಲು ಮೂಲಕ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ನೀರು ಹರಿಸಲಾಗಿದೆ ಎಂದು ಕರ್ನಾಟಕ ತಿಳಿಸಿದೆ. ಈ ಅವಧಿಯಲ್ಲಿ ನಿಗದಿತ 1,84,500 ಕ್ಯೂಸೆಕ್‌ಗಿಂತ ಹೆಚ್ಚುವರಿಯಾಗಿ 32,493 ಕ್ಯೂಸೆಕ್ ಸೇರಿದಂತೆ ಒಟ್ಟು 2,16,993 ಕ್ಯೂಸೆಕ್ ನೀರು ಹರಿಸಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಗಿದೆ.
ಇದರ ನಡುವೆ ರಾಜ್ಯದ ಪ್ರಮುಖ ಜಲಾಶಯಗಳಿಗೆ ಬರುತ್ತಿದ್ದ ಒಳಹರಿವು 77,048 ಕ್ಯೂಸೆಕ್‌ನಿಂದ 9,282 ಕ್ಯೂಸೆಕ್‌ಗೆ ಕುಸಿದಿದೆ. ಹೀಗಾಗಿ ನಿರಂತರವಾಗಿ ಹೆಚ್ಚಿನ ಪ್ರಮಾಣದ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವುದು ಪ್ರಾಯೋಗಿಕವಾಗಿ ಕಷ್ಟಕರ ಎಂದು ಕರ್ನಾಟಕ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮೂರನೇ ಬಾರಿ ನೀರು ಬಿಡುಗಡೆ ಆದೇಶ
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಇದೀಗ ಮೂರನೇ ಬಾರಿ ನೀರು ಬಿಡುಗಡೆ ಸೂಚನೆ ಬಂದಿದೆ. ಮೊದಲಿಗೆ 3,000 ಕ್ಯೂಸೆಕ್, ನಂತರ 12,000 ಕ್ಯೂಸೆಕ್ ಹಾಗೂ ಇದೀಗ ಮುಂದಿನ 15 ದಿನಗಳ ಕಾಲ 9,000 ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಲಾಗಿದೆ.
ಆದರೆ CWRC ನೀಡಿರುವ ಈ ಶಿಫಾರಸಿನ ಬಗ್ಗೆ ನಾಳೆ ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆಯಲ್ಲಿ ಚರ್ಚೆ ನಡೆಯಲಿದೆ. CWRCಯ ಶಿಫಾರಸಿನ ಕುರಿತು ಅಂತಿಮ ನಿರ್ಧಾರ ಅಲ್ಲಿ ಹೊರಬೀಳುವ ಸಾಧ್ಯತೆ ಇದೆ. ಹೀಗಾಗಿ ಕರ್ನಾಟಕ ಸರ್ಕಾರದ ಮುಂದಿನ ನಡೆ ಹಾಗೂ CWMA ತೀರ್ಮಾನದತ್ತ ಎಲ್ಲರ ಗಮನ ನೆಟ್ಟಿದೆ.
