ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮುಂದಿನ 15 ದಿನಗಳ ಕಾಲ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಶಿಫಾರಸು ಮಾಡಿದೆ. ಇಂದು ನಡೆದ CWRC ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೀಗ CWRC ಶಿಫಾರಸಿನ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮಧ್ಯಾಹ್ನದ ಬಳಿಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆ ನಡೆಯಲಿದ್ದು, ಅಲ್ಲಿ ಅಂತಿಮ ಆದೇಶ ಹೊರಬೀಳುವ ಸಾಧ್ಯತೆಯಿದೆ.
ಕರ್ನಾಟಕದಲ್ಲೇ ಮಳೆ ಕೊರತೆ ಹಾಗೂ ಜಲಾಶಯಗಳ ಒಳಹರಿವಿನ ಅನಿಶ್ಚಿತತೆ ಎದುರಾಗಿರುವ ಸಂದರ್ಭದಲ್ಲಿ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಶಿಫಾರಸು ಮಾಡಿರುವುದು ರಾಜ್ಯದ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಕುಡಿಯುವ ನೀರು, ಕೃಷಿ ಹಾಗೂ ಅಗತ್ಯ ಬಳಕೆಗೆ ನೀರನ್ನು ಸಂರಕ್ಷಿಸಬೇಕಾದ ಪರಿಸ್ಥಿತಿ ಇರುವಾಗ ಪ್ರತಿದಿನ ಇಷ್ಟು ಪ್ರಮಾಣದ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಕರ್ನಾಟಕದ ವಾದವೇನು?
ಕರ್ನಾಟಕದ ನಾಲ್ಕು ಪ್ರಮುಖ ಕಾವೇರಿ ಜಲಾಶಯಗಳಿಗೆ ಇದುವರೆಗೆ 77.74 ಟಿಎಂಸಿ ನೀರು ಮಾತ್ರ ಒಳಹರಿವು ಬಂದಿದೆ. ಇದು ಕಳೆದ 30 ವರ್ಷಗಳ ಸರಾಸರಿ ಒಳಹರಿವಿಗಿಂತ ಶೇ.47ರಷ್ಟು ಕಡಿಮೆಯಾಗಿದೆ ಎಂದು ರಾಜ್ಯದ ಅಧಿಕಾರಿಗಳು ಸಭೆಯಲ್ಲಿ ವಾದಿಸಿದ್ದಾರೆ. ಬಿಳಿಗುಂಡ್ಲುವಿನಲ್ಲಿ ಆಗಸ್ಟ್ 10ರವರೆಗೆ 86,942 ಕ್ಯೂಸೆಕ್ ನೀರು ಹರಿದುಬಂದಿದ್ದು, ನಿಗದಿತ 52,500 ಕ್ಯೂಸೆಕ್ ಪ್ರಮಾಣಕ್ಕಿಂತ ಹೆಚ್ಚಾಗಿದೆ ಎಂಬ ಅಂಶವನ್ನೂ ಕರ್ನಾಟಕ ಮುಂದಿಟ್ಟಿದೆ.
ಮುಂದಿನ ದಿನಗಳಲ್ಲಿ ಮಳೆ ಹಾಗೂ ಜಲಾಶಯಗಳ ಒಳಹರಿವು ಹೇಗಿರಲಿದೆ ಎಂಬುದು ಸ್ಪಷ್ಟವಾಗಿಲ್ಲ. ಹೀಗಾಗಿ ಹೆಚ್ಚುವರಿ ನೀರು ಬಿಡುಗಡೆ ಮಾಡಿದರೆ ರಾಜ್ಯದ ಕುಡಿಯುವ ನೀರು ಮತ್ತು ಕೃಷಿ ಅಗತ್ಯಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕರ್ನಾಟಕ ಹೇಳಿದೆ.
ನೀರಿನ ಹಂಚಿಕೆ ವೇಳೆ ಕೇವಲ ಪ್ರಮಾಣಾನುಪಾತದ ಸೂತ್ರವನ್ನು ಆಧರಿಸುವ ಬದಲು ವಾಸ್ತವಿಕ ಮಳೆ, ಜಲಾಶಯಗಳ ಒಳಹರಿವು ಹಾಗೂ ಹವಾಮಾನ ಪರಿಸ್ಥಿತಿಯನ್ನು ಪರಿಗಣಿಸಬೇಕು ಎಂದು ರಾಜ್ಯ ಒತ್ತಾಯಿಸಿದೆ. ಜಲಾನಯನ ಪ್ರದೇಶದ ಸಂಕಷ್ಟದ ಪರಿಸ್ಥಿತಿಯನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಿ, ಸ್ವತಂತ್ರ ದೈನಂದಿನ ದತ್ತಾಂಶದ ಆಧಾರದ ಮೇಲೆ ನೀರಿನ ಲೆಕ್ಕಾಚಾರ ನಡೆಸಬೇಕು. ಪ್ರಸ್ತುತ ಹೆಚ್ಚುವರಿ ನೀರು ಬಿಡುಗಡೆ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದೆ, ಮುಂಗಾರು ಪರಿಸ್ಥಿತಿ ಮತ್ತು ಜಲಾಶಯಗಳ ಮಟ್ಟವನ್ನು ಗಮನಿಸಿ ಬಳಿಕ ಮರುಪರಿಶೀಲಿಸಬೇಕು ಎಂದು ಕರ್ನಾಟಕ ವಾದಿಸಿದೆ.
ತಮಿಳುನಾಡಿನ ವಾದವೇನು?
ಇತ್ತ ತಮಿಳುನಾಡು, ಜುಲೈ 29ರಿಂದ ಆಗಸ್ಟ್ 12ರವರೆಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡುವ ಹಿಂದಿನ ನಿರ್ದೇಶನವನ್ನು ಪರಿಷ್ಕರಿಸುವಂತೆ ಒತ್ತಾಯಿಸಿದೆ. ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಂದ ನೀರು ಬಿಡುಗಡೆ ಮಾಡುವ ಮೂಲಕ ಬಿಳಿಗುಂಡ್ಲುವಿನಲ್ಲಿ ತಮಿಳುನಾಡಿಗೆ ತಲುಪಬೇಕಾದ ನೀರಿನ ಪ್ರಮಾಣ ಖಚಿತಪಡಿಸಬೇಕು ಎಂದು ವಾದಿಸಿದೆ.
ಆಗಸ್ಟ್ 12ರ ವೇಳೆಗೆ ಕರ್ನಾಟಕದಿಂದ ಬರಬೇಕಿದ್ದ 21.357 ಟಿಎಂಸಿ ನೀರು ಬಾಕಿ ಉಳಿಯಲಿದೆ. ಆಗಸ್ಟ್ 13ರಿಂದ 31ರವರೆಗೆ ಪ್ರಮಾಣಾನುಪಾತದಂತೆ ನೀಡಬೇಕಿರುವ 15.278 ಟಿಎಂಸಿ ನೀರಿನ ಜೊತೆಗೆ ಬಾಕಿ ಉಳಿದಿರುವ ನೀರನ್ನೂ ಬಿಡುಗಡೆ ಮಾಡಬೇಕು. ಆಗಸ್ಟ್ ಅಂತ್ಯದ ವೇಳೆಗೆ ಬಿಳಿಗುಂಡ್ಲುವಿನಲ್ಲಿ ಸುಮಾರು 36.472 ಟಿಎಂಸಿ, ಅಂದರೆ 37 ಟಿಎಂಸಿ ನೀರು ಖಚಿತಪಡಿಸಬೇಕು ಎಂದು ತಮಿಳುನಾಡು ಒತ್ತಾಯಿಸಿದೆ.
CWRC ಶಿಫಾರಸಿಗೆ ಕರ್ನಾಟಕ ತೀವ್ರ ವಿರೋಧ
CWRC 12 ಸಾವಿರ ಕ್ಯೂಸೆಕ್ ನೀರು ಬಿಡಲು ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಇದೀಗ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ರಾಜ್ಯದಲ್ಲಿ ಮತ್ತೆ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗುವ ಸಾಧ್ಯತೆ ಕಡಿಮೆ ಇದ್ದು, ಈ ತಿಂಗಳಲ್ಲಿ ಅಲ್ಪ ಪ್ರಮಾಣದ ಮಳೆಯಷ್ಟೇ ಆಗುವ ನಿರೀಕ್ಷೆಯಿದೆ. ಮತ್ತೊಂದೆಡೆ ತಮಿಳುನಾಡಿನಲ್ಲಿ ಹಿಂಗಾರು ಮಳೆ ಉತ್ತಮವಾಗುವ ಸಾಧ್ಯತೆಯಿದೆ ಎಂಬುದನ್ನು ಕರ್ನಾಟಕ ಮುಂದಿಟ್ಟಿದೆ.
ತಮಿಳುನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದರೆ ಕರ್ನಾಟಕದ ರೈತರ ಕೃಷಿಗೆ ಅಗತ್ಯವಿರುವ ನೀರಿನ ಕೊರತೆ ಉಂಟಾಗಬಹುದು. ಹೀಗಾಗಿ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಬಿಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದ್ದು, CWRC ಶಿಫಾರಸಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ತನ್ನ ವಾದವನ್ನು ಬಲವಾಗಿ ಮಂಡಿಸಲು ಸಜ್ಜಾಗಿದೆ.
