ಹಾಡಹಗಲೇ 40 ಲಕ್ಷ ರೂ. ಮೌಲ್ಯದ ನಗದು, ಚಿನ್ನಾಭರಣ ಹೊತ್ತೊಯ್ದ ಖದೀಮರು..!

Untitled design 2025 12 16T170545.387

ಬೆಂಗಳೂರು: ಬರೋಬ್ಬರಿ 20 ಲಕ್ಷ ರೂಪಾಯಿ ನಗದು ಹಾಗೂ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಲತನವಾಗಿರುವ ಘಟನೆ ಬೆಂಗಳುರಿನ ಭಾರತ್ ನಗರದ ಮುನೇಶ್ವರ ಬಡಾವಣೆಯಲ್ಲಿ ನಡೆದಿದೆ.

ಹಾಸನ ಮೂಲದವರಾದ ಮಾಯಣ್ಣಗೌಡ ಅವರು ಬೆಂಗಳೂರಿನಲ್ಲಿ ‘ಎಸ್.ಎಲ್.ವಿ. ಕಾಂಡಿಮೆಂಟ್ಸ್’ ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಬೆಂಗಳೂರಿನಲ್ಲಿ ಒಂದು ಪುಟ್ಟ ಮನೆ ಖರೀದಿಸಬೇಕೆಂಬ ದೊಡ್ಡ ಕನಸಿತ್ತು. ಈ ಕಾರಣಕ್ಕಾಗಿ ಹಳ್ಳಿಯಿಂದ ಸಾಲ ಮಾಡಿ ತಂದ ಹಣ ಮತ್ತು ತಾಯಿ ಶ್ರಮಪಟ್ಟು ಕೂಡಿಟ್ಟಿದ್ದ ಹಣವನ್ನೆಲ್ಲಾ ಒಗ್ಗೂಡಿಸಿ ಮನೆಯಲ್ಲೇ ಇಟ್ಟಿದ್ದರು.

ಮಾಯಣ್ಣಗೌಡ ಅವರ ದೈನಂದಿನ ಚಟುವಟಿಕೆಯನ್ನು ಗಮನಿಸುತ್ತಿದ್ದ ಕಳ್ಳರು, ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಬಳಸಿಕೊಂಡು ಕೃತ್ಯ ಎಸಗಿದ್ದಾರೆ. ಮಾಯಣ್ಣಗೌಡ ಅವರು ಪ್ರತಿದಿನ ಮುಂಜಾನೆ 4 ಗಂಟೆಗೆ ಅಂಗಡಿಗೆ ತೆರಳುತ್ತಿದ್ದರು. ಬೆಳಿಗ್ಗೆ 11 ಗಂಟೆಗೆ ಅವರ ಪತ್ನಿ ಅಂಗಡಿಗೆ ಹೋದ ಮೇಲೆ ಮಾಯಣ್ಣಗೌಡ ಅವರು ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದರು. ನಂತರ ಸಂಜೆ 4 ಗಂಟೆಗೆ ಮಗಳು ಶಾಲೆಯಿಂದ ಬಂದ ಬಳಿಕ ಆಕೆಯನ್ನು ಕರೆದುಕೊಂಡು ಪುನಃ ಅಂಗಡಿಗೆ ಹೋಗುತ್ತಿದ್ದರು.

ನಿನ್ನೆ ಸಂಜೆ 4 ಗಂಟೆಯಿಂದ ರಾತ್ರಿ 7 ಗಂಟೆಯ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿದ್ದಾರೆ. ಒಳಗಿದ್ದ ಕಬೋರ್ಡ್‌ನ ಬೀಗವನ್ನೂ ಹೊಡೆದು ಹಾಕಿದ ಕಳ್ಳರು, ಅಲ್ಲಿದ್ದ 20 ಲಕ್ಷ ರೂಪಾಯಿ ನಗದು ಮತ್ತು 180 ಗ್ರಾಂ ತೂಕದ ಚಿನ್ನಾಭರಣಗಳನ್ನು (ಮೌಲ್ಯ ಸುಮಾರು 20 ಲಕ್ಷ ರೂ.) ಕದ್ದು ಪರಾರಿಯಾಗಿದ್ದಾರೆ.

ರಾತ್ರಿ 7 ಗಂಟೆಗೆ ಮಾಯಣ್ಣಗೌಡ ಅವರ ಪತ್ನಿ ಅಂಗಡಿಯಿಂದ ಮನೆಗೆ ಹಿಂದಿರುಗಿದಾಗ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ. ಒಳಗೆ ಹೋಗಿ ನೋಡಿದಾಗ ಕಬೋರ್ಡ್‌ನಲ್ಲಿದ್ದ ಹಣ ಮತ್ತು ಒಡವೆ ಮಾಯವಾಗಿರುವುದು ತಿಳಿದುಬಂದಿದೆ. ತಾವೆಲ್ಲರೂ ಅತಿ ಸಣ್ಣ ಕೆಲಸ ಮಾಡಿಕೊಂಡು ಮನೆಗಾಗಿ ಪೈಸೆ ಪೈಸೆ ಕೂಡಿಟ್ಟಿದ್ದ ಹಣ ಕಳುವಾಗಿರುವುದನ್ನು ಕಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಹಾಡಹಗಲೇ ಇಷ್ಟೊಂದು ದೊಡ್ಡ ಮಟ್ಟದ ಕಳ್ಳತನ ನಡೆದಿರುವುದು ಸ್ಥಳೀಯ ನಿವಾಸಿಗಳಲ್ಲಿ ಭೀತಿ ಮೂಡಿಸಿದೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದು ಕೂಡಲೆ ಆರೋಪಿಗಳನ್ನ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Exit mobile version