ಬೆಳಗಾವಿ, ಡಿಸೆಂಬರ್ 8: ಕಾಂಗ್ರೆಸ್ ಸರ್ಕಾರದ ರೈತವಿರೋಧಿ ನೀತಿಗಳಿಗಲನ್ನ ವಿರೋಧಿಸಿ, ಡಿಸೆಂಬರ್ 9, ಬೆಳಗ್ಗೆ ಬೃಹತ್ ರೈತರ ಧರಣಿ ಮಾಡಿ, ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಘೋಷಿಸಿದ್ದಾರೆ.
ಮುಖ್ಯ ಪ್ರತಿಭಟನಾ ಸ್ಥಳವಾದ ಮಾಲಿನಿ ಸಿಟಿ ಮೈದಾನಕ್ಕೆ ಇಂದು ಪೂರ್ವಭಾವಿ ಭೇಟಿ ನೀಡಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಬೆಳಗಾವಿ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಬೆಳಗಾವಿ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ರೈತರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದರು. ಜೊತೆಗೆ ಈ ಪ್ರತಿಭಟನೆಯಲ್ಲಿ ಕನಿಷ್ಠ 20 ರಿಂದ 28 ಸಾವಿರ ಜನರು ಸೇರುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಈ ಸರ್ಕಾರ ಕಣ್ಣಿದ್ದೂ ಕುರುಡನಂತೆ, ಕಿವಿಯಿದ್ದೂ ಕಿವುಡನಂತೆ ನಟಿಸುತ್ತಿದೆ ಎಂದು ಅವರು ಟೀಕಿಸಿದರು. ಪರಿಹಾರದ ವಿಚಾರ ಕೇಳಿದರೆ ಕೇಂದ್ರದ ಮೇಲೆ ಆರೋಪಿಸುತ್ತಾರೆ ಎಂದು ಆಕ್ಷೇಪಿಸಿದರು. ರಾಜ್ಯ ಸರಕಾರಕ್ಕೆ ಜವಾಬ್ದಾರಿಯೇ ಇಲ್ಲ ಎಂದು ದೂರಿದರು.
ಕಬ್ಬು ಬೆಳೆಗಾರರ ಸಮಸ್ಯೆ ಇನ್ನೂ ಸಂಪೂರ್ಣವಾಗಿ ಇತ್ಯರ್ಥ ಆಗಿಲ್ಲ. ಕೇಂದ್ರವು ಮೆಕ್ಕೆ ಜೋಳಕ್ಕೆ 2400 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ, ರಾಜ್ಯ ಸರಕಾರವು ಸೂಕ್ತ ಸಮಯದಲ್ಲಿ ಖರೀದಿ ಕೇಂದ್ರ ತೆರೆಯದ ಕಾರಣ ಮೆಕ್ಕೆ ಜೋಳ ಬೆಳೆಯುವ ರೈತರು 1500, 1600 ರೂಪಾಯಿಗೆ ಮೆಕ್ಕೆ ಜೋಳ ಮಾರಾಟ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಹತ್ತಿ, ತೊಗರಿ ಮೊದಲಾದ ರೈತರ ಸಮಸ್ಯೆ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಗಾದಿಗೆ ಕಚ್ಚಾಟದ ಕರಿನೆರಳು ರಾಜ್ಯದ ಮೇಲೆ ಬಿದ್ದಿದೆ. ರಾಜ್ಯ ಸರಕಾರವು ತನ್ನ ವೈಫಲ್ಯವನ್ನು ಮುಚ್ಚಿ ಹಾಕಿಕೊಳ್ಳಲು ಕೇಂದ್ರ ಸರ್ಕಾರವನ್ನು ದೂರುವ ಪರಿಪಾಠವನ್ನು ಮುಂದುವರೆಸಿದೆ ಎಂದು ಟೀಕಿಸಿದರು. ಇವೆಲ್ಲವನ್ನೂ ಸದನದಲ್ಲಿ ಚರ್ಚಿಸುತ್ತೇವೆ ಎಂದು ವಿಜಯೇಂದ್ರ ಹೇಳಿದರು.
ರೊಚ್ಚಿಗೆದ್ದ ರೈತರ ಪರ ಧ್ವನಿ – ಆರ್.ಅಶೋಕ್
ರೊಚ್ಚಿಗೆದ್ದ ರೈತರ ಪರ ಧ್ವನಿ ಎತ್ತುತ್ತಿದ್ದೇವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿಳಿಸಿದರು. ಬಿಜೆಪಿ, ಯಡಿಯೂರಪ್ಪನವರು ಮೊದಲಿನಿಂದಲೂ ರೈತಪರವಾಗಿ ಕೆಲಸ ಮಾಡುತ್ತ ಬಂದಿದ್ದಾಗಿ ವಿವರಿಸಿದರು. ಹೋರಾಟದ ಮೂಲಕ ಬಿಜೆಪಿ ಬೆಳೆದಿದೆ. ವಿಧಾನಸೌಧದಲ್ಲೂ ರೈತಪರವಾಗಿ ಧ್ವನಿ ಎತ್ತಲಿದೆ ಎಂದು ಹೇಳಿದರು.
