ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಉದ್ಭವಿಸಿರುವ ಗೊಂದಲ ಮತ್ತು ಅಕ್ರಮ ಆರೋಪಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಮನೆ-ಮನೆಗೆ ತೆರಳಿ ನಡೆಯಬೇಕಾದ ಪರಿಷ್ಕರಣೆ ಕೆಲವೆಡೆ ಮಸೀದಿ, ಮಂದಿರ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಇದರ ವಿರುದ್ಧ ಹೋರಾಟಕ್ಕೆ ಬಿಜೆಪಿ ತೀರ್ಮಾನಿಸಿದೆ. ಈ ಹೋರಾಟದ ಮೊದಲ ಹಂತವಾಗಿ ಸೋಮವಾರ ಮಿತ್ರಪಕ್ಷ ಜೆಡಿಎಸ್ ಜತೆ ಸೇರಿ ಚುನಾವಣಾ ಆಯೋಗಕ್ಕೆ ಎಸ್‌ಐಆರ್ ಪ್ರಕ್ರಿಯೆಯ ಅಕ್ರಮಗಳ ಕುರಿತು ದೂರು ಸಲ್ಲಿಸಲು ಪಕ್ಷ ನಿರ್ಧರಿಸಿದೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಪ್ರಮಾದಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಭಾನುವಾರ ಪಕ್ಷದ ಕಚೇರಿಯಲ್ಲಿ ಬೆಳಿಗ್ಗೆ ರಾಜ್ಯ ಪದಾಧಿಕಾರಿಗಳ ಸಭೆ ಹಾಗೂ ಮಧ್ಯಾಹ್ನ ಕೋರ್ ಕಮಿಟಿ ಸಭೆ ನಡೆಸಿತು. ಸಭೆಯಲ್ಲಿ ರಾಜ್ಯ ಪದಾಧಿಕಾರಿಗಳು ಮತ್ತು ಹಿರಿಯ ನಾಯಕರನ್ನೊಳಗೊಂಡ ಕೋರ್ ಕಮಿಟಿ ಸದಸ್ಯರು ತಮಗೆ ವಹಿಸಲಾದ ಉಸ್ತುವಾರಿ ವಿಭಾಗಗಳು ಹಾಗೂ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿನ ಶಾಸಕರು, ಸಂಸದರು, ಮಾಜಿ ಜನಪ್ರತಿನಿಧಿಗಳು ಮತ್ತು ಮುಖಂಡರೊಂದಿಗೆ ಸಮಾಲೋಚನೆ ನಡೆಸುವಂತೆ ಸೂಚಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡು ನಿಗಾ ವಹಿಸಬೇಕು ಎಂಬ ತೀರ್ಮಾನಕ್ಕೂ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಕೋರ್ ಕಮಿಟಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಎಸ್‌ಐಆರ್ ಪ್ರಕ್ರಿಯೆಯನ್ನು ಗೊಂದಲಮಯವಾಗಿಸುತ್ತಿದೆ ಎಂದು ಆರೋಪಿಸಿದರು. ಮತದಾರರ ಪಟ್ಟಿ ಪರಿಷ್ಕರಣೆ ಸಮರ್ಪಕವಾಗಿ, ಪಾರದರ್ಶಕವಾಗಿ ಮತ್ತು ನಿಯಮಾನುಸಾರ ನಡೆಯಬೇಕು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಹೆಚ್ಚು ಚುರುಕಾಗಿ ತೊಡಗಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಚರ್ಚೆಯಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ, ಎಸ್‌ಐಆರ್ ಅಕ್ರಮಗಳ ಬಗ್ಗೆ ದೂರುಗಳ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಸೋಮವಾರ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಹಲವು ದೂರುಗಳು ಸಲ್ಲಿಕೆಯಾಗಿರುವ ಹಿನ್ನೆಲೆ, ಆಯೋಗದ ತಂಡ ಪರಿಸ್ಥಿತಿ ಅವಲೋಕನ ನಡೆಸಲಿದೆ.
ಈ ವಿಚಾರವಾಗಿ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಕೂಡ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಎಸ್‌ಐಆರ್ ಅಕ್ರಮ ತಡೆಯಲಾಗದ ರಾಜ್ಯ ಸರ್ಕಾರ ಕತ್ತೆ ಕಾಯಲೂ ಲಾಯಕ್ಕಿಲ್ಲ” ಎಂದು ಅವರು ಕಿಡಿಕಾರಿದರು. ಚುನಾವಣಾ ಆಯೋಗ ತನ್ನ ಕರ್ತವ್ಯ ಮಾಡುತ್ತಿದೆ, ಆದರೆ ರಾಜ್ಯ ಸರ್ಕಾರವೇ ವಿಫಲವಾಗಿದೆ ಎಂದು ಆರೋಪಿಸಿದ ಜೋಶಿ, ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಕೆಲವೆಡೆ ಶೇ.100 ಮತ್ತು ಮತ್ತಿತರ ಕಡೆ ಶೇ.80 ಮ್ಯಾಚಿಂಗ್ ಆಗುತ್ತಿರುವುದನ್ನು ಪ್ರಶ್ನಿಸಿ, “ರಾಜ್ಯದಲ್ಲಿ ಯಾರೂ ಮರಣ ಹೊಂದಿಲ್ಲವೇ? ಎಲ್ಲರೂ ಚಿರಂಜೀವಿಗಳೇ?” ಎಂದು ವ್ಯಂಗ್ಯವಾಡಿದರು.
ಎಸ್‌ಐಆರ್ ಪ್ರಕ್ರಿಯೆ ಇದೀಗ ರಾಜಕೀಯ ಕಾದಾಟದ ಕೇಂದ್ರಬಿಂದುವಾಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಹಾಗೂ ಕೇಂದ್ರ ಚುನಾವಣಾ ಆಯೋಗದ ಮುಂದಿನ ಕ್ರಮಗಳತ್ತ ರಾಜ್ಯದ ಗಮನ ಕೇಂದ್ರೀಕೃತವಾಗಿದೆ.
