ಬೆಂಗಳೂರು: ರಾಜ್ಯ ಬಿಜೆಪಿ ರಾಜಕೀಯ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ನಾಳೆ ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದ್ದು, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಹಲವು ಮಹತ್ವದ ರಾಜಕೀಯ ಹಾಗೂ ಸಂಘಟನೆ ಸಂಬಂಧಿತ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ಇತ್ತೀಚಿನ ರಾಜ್ಯ ರಾಜಕೀಯ ಬೆಳವಣಿಗೆಗಳು, ಪಕ್ಷದ ಒಳಗಿನ ಸವಾಲುಗಳು, ಸರ್ಕಾರದ ವಿರುದ್ಧ ಹೋರಾಟದ ರೂಪುರೇಷೆಗಳು ಮತ್ತು ಮುಂದಿನ ಚುನಾವಣಾ ಸಿದ್ಧತೆಗಳು ಸಭೆಯ ಪ್ರಮುಖ ಅಜೆಂಡಾಗಳಾಗಿವೆ.
ಮಾಹಿತಿ ಪ್ರಕಾರ, ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಾಲ್ಕುಕ್ಕೂ ಹೆಚ್ಚು ಪ್ರಮುಖ ಅಂಶಗಳ ಮೇಲೆ ಚರ್ಚೆ ನಡೆಯಲಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಕ್ಷಕ್ಕೆ ಉಂಟಾಗಿರುವ ಹಿನ್ನಡೆ, ಸಂಘಟನೆಗೆ ಮತ್ತಷ್ಟು ಚುರುಕು ನೀಡುವ ಅಗತ್ಯ ಮತ್ತು ಸರ್ಕಾರದ ವಿರುದ್ಧ ಪರಿಣಾಮಕಾರಿ ಹೋರಾಟ ರೂಪಿಸುವ ಕುರಿತು ನಾಯಕರು ಚಿಂತನೆ ನಡೆಸಲಿದ್ದಾರೆ.
ಸಭೆಯಲ್ಲಿ ಅಡ್ಡಮತದಾನದಿಂದ ಬಿಜೆಪಿಗೆ ಉಂಟಾದ ರಾಜಕೀಯ ನಷ್ಟದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಈ ಬೆಳವಣಿಗೆ ಪಕ್ಷದೊಳಗಿನ ಶಿಸ್ತಿನ ಪ್ರಶ್ನೆಯನ್ನು ಎಬ್ಬಿಸಿದ್ದು, ಭವಿಷ್ಯದಲ್ಲಿ ಇಂತಹ ಸಂದರ್ಭಗಳು ಮರುಕಳಿಸದಂತೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಅಭಿಪ್ರಾಯ ವಿನಿಮಯವಾಗಲಿದೆ. ಜೊತೆಗೆ ಪಕ್ಷದ ನಾಯಕರಿಂದ ಬರುತ್ತಿರುವ ಡ್ಯಾಮೇಜ್ ಹೇಳಿಕೆಗಳಿಗೆ ಬ್ರೇಕ್ ಹಾಕುವ ಬಗ್ಗೆ ಸಹ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.
ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ಹೇಳಿಕೆಯಿಂದ ಪಕ್ಷಕ್ಕೆ ಉಂಟಾದ ನಷ್ಟದ ಕುರಿತು ಕೂಡ ಸಭೆಯಲ್ಲಿ ವಿಶ್ಲೇಷಣೆ ನಡೆಯಲಿದೆ. ಇಂತಹ ಹೇಳಿಕೆಗಳು ಪಕ್ಷದ ಸಾರ್ವಜನಿಕ ಇಮೇಜ್‌ಗೆ ಧಕ್ಕೆ ತರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಯಾರೂ ವಿವಾದಾತ್ಮಕ ಹೇಳಿಕೆಗಳನ್ನು ನೀಡದಂತೆ ಕಟ್ಟುನಿಟ್ಟಿನ ಸಂದೇಶ ರವಾನಿಸುವ ಸಾಧ್ಯತೆ ಇದೆ.
ಬಿಡದಿ ಭೂ ಸ್ವಾಧೀನ ಪ್ರಕರಣದಲ್ಲಿ ಬಿಜೆಪಿ ಯಾವ ರೀತಿಯ ಹೋರಾಟ ರೂಪಿಸಬೇಕು ಎಂಬುದೂ ಸಭೆಯ ಪ್ರಮುಖ ಅಂಶವಾಗಿದೆ. ಈ ವಿಷಯದಲ್ಲಿ ಸರ್ಕಾರದ ವಿರುದ್ಧ ಜನಪರ ಮತ್ತು ರಾಜಕೀಯ ಹೋರಾಟವನ್ನು ಹೇಗೆ ತೀವ್ರಗೊಳಿಸಬೇಕು ಎಂಬುದರ ಕುರಿತು ಚರ್ಚೆ ನಡೆಯಲಿದೆ. ಇದೇ ರೀತಿ ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ವಿಚಾರವನ್ನೂ ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಅದರ ವಿರುದ್ಧ ಪಕ್ಷದ ಹೋರಾಟದ ಕಾರ್ಯತಂತ್ರ ರೂಪಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನವಾಗುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ವಿವಿಧ ಆರೋಪಗಳನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ಜನರ ನಡುವೆ ಹೇಗೆ ಹೋಗಬೇಕು, ಸರ್ಕಾರವನ್ನು ಹೇಗೆ ಟೀಕಿಸಬೇಕು ಎಂಬುದರ ಕುರಿತೂ ಚರ್ಚೆ ನಡೆಯಲಿದೆ. ಇದರ ಜೊತೆಗೆ ಬಿಜೆಪಿ ಸಂಘಟನೆಗೆ ಮತ್ತಷ್ಟು ಚುರುಕು ನೀಡುವುದು, ಕಾರ್ಯಕರ್ತರನ್ನು ಸಕ್ರಿಯಗೊಳಿಸುವುದು ಹಾಗೂ ಮುಂಬರುವ ಜಿಬಿಎ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಗತ್ಯ ಸಿದ್ಧತೆ ನಡೆಸುವ ಬಗ್ಗೆ ಸಭೆಯಲ್ಲಿ ಮಹತ್ವದ ನಿರ್ಧಾರಗಳು ಕೈಗೊಳ್ಳುವ ಸಾಧ್ಯತೆ ಇದೆ.
