ಅಪಘಾತ ಪ್ರಕರಣಕ್ಕೆ ಕೊಲೆ ತಿರುವು: ಸೈನಿಕ ಪತಿ ಬಂಧನ!

Untitled design 2026 06 30T181944.840

ಬೀದರ್ (ಜೂನ್ 30): ಬೀದರ್ ಜಿಲ್ಲೆಯ ಧನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂನ್ 26ರಂದು ನಡೆದಿದ್ದ ದಂಪತಿಯ ಮೇಲಿನ ಹಲ್ಲೆ ಪ್ರಕರಣ ಇದೀಗ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ. ಪತ್ನಿಯ ಸಾವಿನ ಬಳಿಕ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪ್ರದೀಪ್ ಗುಂಟಿ  ಈ ಕುರಿತಂತೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಜೂನ್ 26ರಂದು ಖಾನಾಪುರ ರಸ್ತೆಯ ಸಿದ್ದೇಶ್ವರ ಮಠದ ಸಮೀಪ ರಸ್ತೆ ಬದಿಯಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ದಂಪತಿಗಳಿಬ್ಬರು ಪತ್ತೆಯಾಗಿದ್ದರು. ಸ್ಥಳೀಯ ಹೋಂ ಗಾರ್ಡ್ ಮೊದಲಿಗೆ ಇದನ್ನು ರಸ್ತೆ ಅಪಘಾತ ಎಂದು ಭಾವಿಸಿ ತಕ್ಷಣ ಆಂಬುಲೆನ್ಸ್‌ಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಇಬ್ಬರನ್ನೂ ಬೀದರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕಲ್ಪಿಸಿದ್ದರು.

ಆದರೆ ಚಿಕಿತ್ಸೆ ವೇಳೆ ಯುವತಿ ಸಂಜನಾ (26) ಪೊಲೀಸರಿಗೆ ನೀಡಿದ ಹೇಳಿಕೆ ಈ ಪ್ರಕರಣದ ದಿಕ್ಕನ್ನೇ ಬದಲಿಸಿತು. “ನನ್ನ ಪತಿಯೇ ನನ್ನನ್ನು ಕೊಲ್ಲಲು ಯತ್ನಿಸಿದ್ದಾನೆ” ಎಂದು ಯುವತಿ ಆರೋಪಿಸಿದ್ದು, ಕಾರಿನಲ್ಲಿದ್ದ ಸ್ಪ್ಯಾನರ್‌ನಿಂದ ತಲೆಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಭಗವತ್ ಜ್ಞಾನೇಶ್ವರ್ ಸಿಕಂದರಾಬಾದ್ ಕ್ಯಾಂಟೋನ್ಮೆಂಟ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಸೇನಾ ಸಿಬ್ಬಂದಿಯಾಗಿದ್ದು, ಘಟನೆಯ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೀದರ್‌ನಿಂದ ಸೋಲಾಪುರದ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಅವರು ಮೃತಪಟ್ಟಿದ್ದಾರೆ.

ಮಹಿಳೆಯ ಸಾವಿನ ಹಿನ್ನೆಲೆಯಲ್ಲಿ ಮಾರಣಾಂತಿಕ ಹಲ್ಲೆ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿರುವ ಪೊಲೀಸರು ಆರೋಪಿ ಭಗವತ್ ಜ್ಞಾನೇಶ್ವರ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ದಂಪತಿ ನಡುವೆ ಕಳೆದ ಕೆಲವು ತಿಂಗಳುಗಳಿಂದ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದೇ ವೇಳೆ,  ಭಗವತ್ ಜ್ಞಾನೇಶ್ವರ್ ಬೇರೆ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನವನ್ನು ಮೃತ ಮಹಿಳೆಯ ಕುಟುಂಬಸ್ಥರು ವ್ಯಕ್ತಪಡಿಸಿದ್ದು, ಇದೇ ಕಾರಣದಿಂದ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಕೊಲೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ.

ಇನ್ನೊಂದೆಡೆ, ಆಹಾರದಲ್ಲಿ ಕೀಟನಾಶಕ ಬೆರೆಸಿ ಕೊಲೆ ಮಾಡಲು ಯತ್ನಿಸಲಾಗಿದೆ ಎಂಬ ಆರೋಪಗಳೂ ಕೇಳಿಬಂದಿದ್ದರೂ, ಈ ಸಂಬಂಧ ಯಾವುದೇ ಅಧಿಕೃತ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ ಎಂದು ಎಸ್‌ಪಿ ಪ್ರದೀಪ್ ಗುಂಟಿ ಸ್ಪಷ್ಟಪಡಿಸಿದ್ದಾರೆ. ಸದ್ಯ ಲಭ್ಯವಿರುವ ಎಲ್ಲಾ ಸಾಕ್ಷ್ಯಾಧಾರಗಳನ್ನು ಆಧರಿಸಿ ಪ್ರಕರಣದ ಸಮಗ್ರ ತನಿಖೆ ಮುಂದುವರಿದಿದೆ. 

Exit mobile version