ಬಿಡದಿ ಟೌನ್‌ಶಿಪ್ ಜಟಾಪಟಿ: ಭೂಸ್ವಾಧೀನ ಆದೇಶ ಹಿಂಪಡೆಯಲು ವಿಜಯೇಂದ್ರ ಆಗ್ರಹ

Untitled design 2026 06 17T134945.736

ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಭೂಸ್ವಾಧೀನ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪ್ರಾಥಮಿಕ ಆದ್ಯತೆ ರೈತರ ಹಿತಾಸಕ್ತಿ ಅಲ್ಲ ಎಂದು ಟೀಕಿಸಿದರು. ಬಡವರಿಗೆ ಮನೆ ನೀಡುವುದು ಅಥವಾ ಜನಪರ ಯೋಜನೆಗಳನ್ನು ರೂಪಿಸುವುದು ಸರ್ಕಾರದ ಗಮನದಲ್ಲಿಲ್ಲ, ಬದಲಾಗಿ ರಿಯಲ್ ಎಸ್ಟೇಟ್ ಯೋಜನೆಗಳೇ ಪ್ರಮುಖ ಆದ್ಯತೆ ಆಗಿವೆ ಎಂದರು. ರೈತರ ನೆರವಿಗೆ ಬರೋದು ಸರ್ಕಾರದ ಮೂಲ ಕರ್ತವ್ಯವಾಗಿದ್ದರೂ, ಮುಖ್ಯಮಂತ್ರಿ ಬೆಂಗಳೂರಿನ ರಿಯಲ್ ಎಸ್ಟೇಟ್ ಯೋಜನೆಗಳ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು. ಭೂಸ್ವಾಧೀನ ಆದೇಶವನ್ನು ತಕ್ಷಣ ಕೈಬಿಟ್ಟು, ರೈತರ ಸಮಸ್ಯೆಗಳನ್ನು ಆಲಿಸುವಂತೆ ಮುಖ್ಯಮಂತ್ರಿ ಅವರಿಗೆ ವಿಜಯೇಂದ್ರ ಆಗ್ರಹಿಸಿದರು.

ಬಿಡದಿ ಭಾಗದಲ್ಲಿ ಬಿಜೆಪಿ ನಾಯಕರ ವಿರುದ್ಧ ಪೋಸ್ಟರ್ ಅಂಟಿಸಿರುವ ವಿಚಾರಕ್ಕೂ ವಿಜಯೇಂದ್ರ ಪ್ರತಿಕ್ರಿಯೆ ನೀಡಿ, ತಮ್ಮನ್ನು ಕಾಂಗ್ರೆಸ್ ಶಾಸಕರಂತೆ ಭಾವಿಸಿ ಗುರಿಯಾಗಿಸಲಾಗಿದೆ ಎಂದು ಅವರು ಹೇಳಿದರು. ಪೋಸ್ಟರ್ ಅಭಿಯಾನಗಳಿಗೆ ಬಿಜೆಪಿ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇಂತಹ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ ಎಂದರು. ರೈತರ ಹಿತಕ್ಕಾಗಿ ಹೋರಾಟ ಮುಂದುವರಿಸುವುದು ತಮ್ಮ ಕರ್ತವ್ಯ ಎಂದರು.

ಇದೇ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಚರ್ಚೆಯನ್ನೂ ಅವರು ಟೀಕಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ಕಾಂಗ್ರೆಸ್ ಎಂಎಲ್ಸಿಯೊಬ್ಬರು ಐಟಿ ಪಾವತಿದಾರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ನೀಡಬೇಕೇ ಎಂಬ ಪ್ರಶ್ನೆ ಎತ್ತಿರುವುದನ್ನು ಉಲ್ಲೇಖಿಸಿ, ಇದು ಸರ್ಕಾರದ ಗೊಂದಲವನ್ನು ತೋರಿಸುತ್ತದೆ ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ನಿರ್ವಹಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ವಿಜಯೇಂದ್ರ, ಹಣ ಸಂಗ್ರಹಿಸಲು ವಿವಿಧ ಯೋಜನೆಗಳಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಬಿಡದಿ ಟೌನ್‌ಶಿಪ್ ಭೂಸ್ವಾಧೀನ ವಿವಾದವು ರಾಜ್ಯ ರಾಜಕೀಯದಲ್ಲಿ ಹೊಸ ತೀವ್ರತೆಯನ್ನು ಪಡೆದುಕೊಂಡಿದ್ದು, ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.

Exit mobile version