ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತಮ್ಮ ಮಗುವಿನೊಂದಿಗೆ 5ನೇ ಅಂತಸ್ತಿನ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಕಮ್ಮನಹಳ್ಳಿಯಲ್ಲಿ ನಡೆದಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಭಯಭೀತರಾಗಿದ್ದರು.
ಮಹಿಳೆ ಕಟ್ಟಡದ ಮೇಲ್ಭಾಗಕ್ಕೆ ಏರಿ ಮಗುವನ್ನು ಕೈಯಲ್ಲಿ ಹಿಡಿದು ನಿಂತಿದ್ದರಿಂದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಹುಳಿಮಾವು ಪೊಲೀಸರು, ಅಗ್ನಿಶಾಮಕ ದಳ ಹಾಗೂ ಎಸ್‌ಡಿಆರ್‌ಎಫ್ (SDRF) ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು.
ಈ ವೇಳೆ ಮಹಿಳೆ ಮುಖ್ಯಮಂತ್ರಿ (ಸಿಎಂ) ಸ್ಥಳಕ್ಕೆ ಆಗಮಿಸಬೇಕು ಎಂದು ಒತ್ತಾಯಿಸಿದ್ದು, ಇದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತ್ತು. ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಮಹಿಳೆಯೊಂದಿಗೆ ನಿರಂತರವಾಗಿ ಮಾತುಕತೆ ನಡೆಸಿ, ಯಾವುದೇ ಆತುರದ ನಿರ್ಧಾರ ಕೈಗೊಳ್ಳದಂತೆ ಮನವೊಲಿಸಲು ಪ್ರಯತ್ನಿಸಿದರು. ಹಲವು ಗಂಟೆಗಳ ಕಾಲ ನಡೆದ ಹೈಡ್ರಾಮದ ಬಳಿಕ ಮಹಿಳೆ ಮನಸ್ಸು ಬದಲಿಸಿಕೊಂಡು ಕೆಳಗಿಳಿಯಲು ಒಪ್ಪಿಕೊಂಡರು.
ಪೊಲೀಸರ ಸಮಯಪ್ರಜ್ಞೆ ಮತ್ತು ಸೂಕ್ತ ಮಾತುಕಥೆಯಿಂದ ಮಹಿಳೆ ಹಾಗೂ ಮಗುವನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಬಳಿಕ ಇಬ್ಬರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೌಟುಂಬಿಕ ಕಲಹವೇ ಈ ಆತ್ಮಹತ್ಯೆ ಯತ್ನಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ಆದರೆ ಘಟನೆಗೆ ನಿಖರ ಕಾರಣವೇನು, ಮಹಿಳೆ ಯಾವ ಕಾರಣಕ್ಕೆ ಇಂತಹ ನಿರ್ಧಾರಕ್ಕೆ ಬಂದರು ಹಾಗೂ ಅವರ ಬೇಡಿಕೆಗಳ ಏನು ಎಂಬುದರ ಕುರಿತು ಹುಳಿಮಾವು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ಸಾರ್ವಜನಿಕರ ಗಮನ ಸೆಳೆದಿದ್ದು, ಸಂಕಷ್ಟದ ಸಂದರ್ಭಗಳಲ್ಲಿ ಆತುರದ ನಿರ್ಧಾರಗಳ ಬದಲು ಕಾನೂನು ಹಾಗೂ ಕುಟುಂಬದ ಸಹಕಾರದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯ ಎಂಬ ಸಂದೇಶವನ್ನು ಮತ್ತೊಮ್ಮೆ ನೆನಪಿಸಿದೆ. ಘಟನೆಯ ಸಂಪೂರ್ಣ ಮಾಹಿತಿ ಪೊಲೀಸ್ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.
ಇದೇ ರೀತಿಯಾಗಿ ದಿನಕ್ಕೊಂದರಂತೆ ಕೌಟುಂಬಿಕ ಕಲಹ ಜಗಳ ಹೀಗೆ ಇತ್ಯಾದಿ ಕಾರಣಗಳಿಗಾಗಿ ಜನರು ಪ್ರಾಣ ಕಳೆದುಕೊಳ್ಳುವ ಘಟನೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಇದೇ ರೀತಿ ಮುಂದುವರೆದರೆ ಯುವ ಪೀಳಿಗೆ ಸಣ್ಣ ಸಣ್ಣ ವಿಷಯಕ್ಕೂ ಸಹ ತಾಳ್ಮೆ ಕಳೆದುಕೊಳ್ಳುವ ಸಮಯ ಬರುತ್ತದೆ.