ಬೆಂಗಳೂರು ನ.12: ರಾಜಧಾನಿ ಬೆಂಗಳೂರಿನಲ್ಲಿ ಪೈಶಾಚಿಕ ಘಟನೆ ನಡೆದಿದೆ. ಮಾತಾಡಲು ಆಗದ, ನಡೆಯಲು ಆಗದ, ಬುದ್ಧಿಯಲ್ಲಿ ಮಗುವಿನಂತೆ ಇರುವ ವಿಶೇಷ ಚೇತನ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನಿಗೆ ಸ್ಥಳೀಯರು ರಕ್ತದಾಹದ ಧರ್ಮದೇಟು ನೀಡಿದ್ದಾರೆ. ಈ ಘಟನೆ ಆಡುಗೋಡಿಯ ಎಂಆರ್ ನಗರದಲ್ಲಿ ನವೆಂಬರ್ 6ರಂದು ನಡೆದಿದೆ.
ಆರೋಪಿ ವಿಘ್ನೇಶ್ ಅಲಿಯಾಸ್ ದಾಡು (ವಯಸ್ಸು ತಿಳಿಯದು) ಎಂಬಾತ ಗಾಂಜಾ ನಶೆಯಲ್ಲಿ ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ದಾನೆ. ಯುವತಿಯ ಕುಟುಂಬಸ್ಥರು ನವೆಂಬರ್ 9ರಂದು ಊರಿನಲ್ಲಿ ನಡೆಯುತ್ತಿದ್ದ ಮದುವೆಗೆ ತೆರಳಿದ್ದರು. ಮಾತಿಲ್ಲದ, ಕಾಲುಗಳು ಸ್ವಾಧೀನಕ್ಕೆ ಒಳಪಡದ ಮಗಳನ್ನು ಮನೆಯಲ್ಲೇ ಬಿಟ್ಟು ಹೋಗುವುದು ಬೇಡವೆಂದು ತಾಯಿಗೆ ಅನಿಸಿತ್ತು. ಆದರೂ ಆಕೆಯನ್ನು ಮನೆಯಲ್ಲೇ ಇರಿಸಿ, ಹೊರಗಿನಿಂದ ಚಿಲಕ ಹಾಕಿ ಕುಟುಂಬಸ್ಥರು ತೆರಳಿದ್ದರು.
ಬೆಳಗ್ಗೆ 11 ಗಂಟೆ ಸುಮಾರಿಗೆ ವಿಘ್ನೇಶ್ ಮನೆ ಬಳಿ ಬಂದ. ಗಾಂಜಾದ ನಶೆಯಲ್ಲಿದ್ದ ಆತ, ಚಿಲಕ ತೆಗೆದು ಮನೆ ಒಳಗೆ ನುಗ್ಗಿದ್ದಾನೆ. ಆ ಬಳಿಕ ಒಳಗಿನಿಂದಲೇ ಚಿಲಕ ಹಾಕಿಕೊಂಡು ಯಾವುದೇ ಅನುಮಾನ ಬರದಂತೆ ಮಾಡಿದ್ದಾನೆ. ಈ ನಡುವೆ “ಮಗಳನ್ನು ನೋಡಿಕೊಂಡು ಬರೋಣ” ಎಂದು ಯುವತಿಯ ತಾಯಿ ಮನೆಗೆ ತೆರಳಿದ್ದರು. ಬಾಗಿಲು ಒಳಗಿನಿಂದ ಚಿಲಕ ಹಾಕಿರುವುದನ್ನು ಕಂಡು ಆಕೆಗೆ ಅನುಮಾನ ಮೂಡಿತು. ನಂತರ, ಕಾಲಿನಿಂದ ಒದ್ದು ಬಾಗಿಲನ್ನೇ ಒಡೆದು ಒಳಗೆ ನುಗ್ಗಿದ್ದಾರೆ.
ಒಳಗೆ ಕಂಡ ದೃಶ್ಯ ತಾಯಿಯನ್ನು ಬೆಚ್ಚಿಬೀಳಿಸಿತು. ಮಗಳ ದೇಹದ ಮೇಲೆ ಒಂದೇ ಒಂದು ಬಟ್ಟೆಯೂ ಇರಲಿಲ್ಲ. ವಿಶೇಷ ಚೇತನಳು ಭಯದಿಂದ ನಡುಗುತ್ತಿದ್ದಳು. ಆರೋಪಿ ವಿಘ್ನೇಶ್ ಬಾಗಿಲ ಬಳಿ ಕುಳಿತಿದ್ದ. ತಾಯಿ ಒಳಗೆ ಬಂದ ತಕ್ಷಣ ಆತ ಒಳ ಉಡುಪು ಧರಿಸಿ ಓಡಿಹೋಗಲು ಯತ್ನಿಸಿದ. ಆದರೆ ತಾಯಿಯ ಕೂಗಾಟ ಕೇಳಿ ಸುತ್ತಮುತ್ತಲಿನವರು ಓಡಿ ಬಂದರು. ಆಕ್ರೋಶಗೊಂಡ ಜನರು ಆತನನ್ನು ಹಿಡಿದು ರಸ್ತೆಯಲ್ಲೇ ಹೊಡೆದು ಧರ್ಮದೇಟು ನೀಡಿದರು. ಬಳಿಕ ಪೊಲೀಸರಿಗೆ ಒಪ್ಪಿಸಲಾಯಿತು.
ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ವಿಶೇಷ ಚೇತನಳ ವಯಸ್ಸು 7 ವರ್ಷದ ಮಗುವಿನಷ್ಟೇ ಇರುವುದರಿಂದ ಪೋಕ್ಸೋ ಕಾಯ್ದೆ ಅನ್ವಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ಚೇತನ ಯುವತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಮಾನಸಿಕ ಆಘಾತದಿಂದ ಆಕೆ ಇನ್ನೂ ನಡುಗುತ್ತಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.





