ಬೆಂಗಳೂರು: ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ಭಾಗದ ನಡುವಿನ ರೈಲು ಸಂಪರ್ಕವನ್ನು ಮತ್ತಷ್ಟು ವೇಗಗೊಳಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬಹುನಿರೀಕ್ಷಿತ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಂಪೂರ್ಣ ಮಾರ್ಗದ ಪ್ರಾಯೋಗಿಕ ಸಂಚಾರವನ್ನು ಇಂದು ನಡೆಸಲು ನೈರುತ್ಯ ರೈಲ್ವೆ ಸಿದ್ಧತೆ ಮಾಡಿಕೊಂಡಿದೆ. ಯಶವಂತಪುರದಿಂದ ಮಂಗಳೂರು ಸೆಂಟ್ರಲ್‌ವರೆಗೆ ರೈಲು ಸಂಚರಿಸಲಿದ್ದು, ಮಾರ್ಗದ ವೇಗ, ಸುರಕ್ಷತೆ ಹಾಗೂ ಪ್ರಯಾಣದ ಅವಧಿಯನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ.
ಈ ವಿಚಾರವನ್ನು ಮಂಗಳೂರು ಸಂಸದ ಬ್ರಿಜೇಶ್ ಚೌಟ ಅವರು ದೃಢಪಡಿಸಿದ್ದಾರೆ. ಇದಕ್ಕೂ ಮುನ್ನ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಕಠಿಣ ಘಾಟ್ ವಿಭಾಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ ಸಂಪೂರ್ಣ ಮಾರ್ಗದಲ್ಲಿ ಟ್ರಯಲ್ ರನ್ ಕೈಗೊಳ್ಳಲಾಗುತ್ತಿದೆ.
ಆಗಸ್ಟ್ 12ರಿಂದ 20ರವರೆಗೆ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಘಾಟ್ ಪ್ರದೇಶದಲ್ಲಿ 20 ಬೋಗಿಗಳ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು. ಇದೀಗ 16 ಬೋಗಿಗಳ ರೇಕ್ ಬಳಸಿ ಯಶವಂತಪುರದಿಂದ ಮಂಗಳೂರು ಸೆಂಟ್ರಲ್‌ವರೆಗೆ ರೈಲನ್ನು ಓಡಿಸಲಾಗುತ್ತಿದೆ.
ತಾತ್ಕಾಲಿಕ ವೇಳಾಪಟ್ಟಿ
ಪ್ರಾಯೋಗಿಕ ಸಂಚಾರದ ವೇಳಾಪಟ್ಟಿಯಂತೆ, ರೈಲು ಬೆಳಗ್ಗೆ 6.05ಕ್ಕೆ ಯಶವಂತಪುರದಿಂದ ಹೊರಡಲಿದೆ. ಬೆಳಗ್ಗೆ 9 ಗಂಟೆಗೆ ಹಾಸನ ತಲುಪಲಿದ್ದು, 9.55ಕ್ಕೆ ಸಕಲೇಶಪುರ ತಲುಪುವ ನಿರೀಕ್ಷೆಯಿದೆ. ಮಧ್ಯಾಹ್ನ 12.30ಕ್ಕೆ ಸುಬ್ರಹ್ಮಣ್ಯ ರೋಡ್ ತಲುಪಿದ ಬಳಿಕ, ಮಧ್ಯಾಹ್ನ 2.25ಕ್ಕೆ ಮಂಗಳೂರು ಸೆಂಟ್ರಲ್ ತಲುಪುವ ಸಾಧ್ಯತೆ ಇದೆ.
ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 3 ಗಂಟೆಗೆ ರೈಲು ವಾಪಸ್ ಹೊರಡಲಿದ್ದು, ರಾತ್ರಿ 11 ಗಂಟೆ ಸುಮಾರಿಗೆ ಯಶವಂತಪುರ ತಲುಪುವ ನಿರೀಕ್ಷೆಯಿದೆ. ಹೀಗಾಗಿ ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣಕ್ಕೆ ಸುಮಾರು 8 ಗಂಟೆ 20 ನಿಮಿಷಗಳ ಕಾಲಾವಧಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಘಾಟ್ ಸೆಕ್ಷನ್‌ನಲ್ಲಿ ವೇಗ ಪರೀಕ್ಷೆ
ಈ ಟ್ರಯಲ್ ರನ್‌ನಲ್ಲಿ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಘಾಟ್ ವಿಭಾಗದ ಮೇಲೆ ವಿಶೇಷ ಗಮನ ಹರಿಸಲಾಗುತ್ತದೆ. ಕಡಿದಾದ ತಿರುವುಗಳು, ಇಳಿಜಾರುಗಳು ಹಾಗೂ ಘಾಟ್ ಪ್ರದೇಶದಲ್ಲಿ ರೈಲು ಎಷ್ಟು ವೇಗದಲ್ಲಿ ಸುರಕ್ಷಿತವಾಗಿ ಸಂಚರಿಸಬಹುದು ಎಂಬುದನ್ನು ತಾಂತ್ರಿಕ ತಂಡ ಪರಿಶೀಲಿಸಲಿದೆ.
ಪ್ರಯಾಣದ ಸಮಯವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದರ ಜೊತೆಗೆ ಸುರಕ್ಷತೆಗೆ ಯಾವುದೇ ಧಕ್ಕೆಯಾಗದಂತೆ ರೈಲಿನ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬ್ರೇಕಿಂಗ್ ವ್ಯವಸ್ಥೆ, ವೇಗ ನಿಯಂತ್ರಣ ಸೇರಿದಂತೆ ಹಲವು ತಾಂತ್ರಿಕ ಅಂಶಗಳನ್ನು ಪರಿಶೀಲಿಸುವ ಸಾಧ್ಯತೆಯಿದೆ.
ಟ್ರಯಲ್ ರನ್ ಪೂರ್ಣಗೊಂಡ ಬಳಿಕ ರೈಲ್ವೆ ಅಧಿಕಾರಿಗಳು ಸಮಗ್ರ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಿದ್ದಾರೆ. ಈ ವರದಿಯ ಆಧಾರದ ಮೇಲೆ ವಂದೇ ಭಾರತ್ ರೈಲಿನ ವಾಣಿಜ್ಯ ಸಂಚಾರ ಆರಂಭಿಸುವ ದಿನಾಂಕವನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ.
ಬೆಂಗಳೂರು ಮತ್ತು ಮಂಗಳೂರು ನಡುವಿನ ವೇಗದ ರೈಲು ಸಂಪರ್ಕಕ್ಕಾಗಿ ಹಲವು ವರ್ಷಗಳಿಂದ ಎದುರು ನೋಡುತ್ತಿರುವ ಪ್ರಯಾಣಿಕರಿಗೆ ಈ ಪ್ರಾಯೋಗಿಕ ಸಂಚಾರ ಹೊಸ ನಿರೀಕ್ಷೆ ಮೂಡಿಸಿದೆ.
