ಬೆಂಗಳೂರು: ನಂಬಿಕೆಯೇ ಜೀವನದ ಆಧಾರ. ಆದರೆ ಅದೇ ನಂಬಿಕೆಯನ್ನು ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ, ವಿಚ್ಛೇದಿತ ಮಹಿಳೆಯನ್ನು ಮದುವೆಯಾಗಿ, ಮಗು ಜನಿಸಿದ ನಂತರ ಆಕೆಗೆ ವಂಚಿಸಿ ಪರಾರಿಯಾಗಿದ್ದಾನೆ. ಬೆಂಗಳೂರಿನ ಬನಶಂಕರಿಯಲ್ಲಿ ನಡೆದ ಈ ಘಟನೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಘಟನೆಯ ಹಿನ್ನೆಲೆ:
ಬನಶಂಕರಿ ನಿವಾಸಿ ಮೋಹನ್ ರಾಜ್ ಎಂಬಾತ ಈ ವಂಚನೆ ಎಸಗಿದ ಆರೋಪಿ. ಸಂತ್ರಸ್ತ ಮಹಿಳೆಗೆ ಈತನ ಪರಿಚಯ ಕಳೆದ 10 ವರ್ಷಗಳಿಂದ ಇತ್ತು. ಮಹಿಳೆಯು 2021ರಲ್ಲಿ ತನ್ನ ಮೊದಲ ಪತಿಯಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದರು. ಮೊದಲ ಪತಿಗೆ ಇದ್ದ ಅನಾರೋಗ್ಯ ಸಮಸ್ಯೆಯಿಂದಾಗಿ ಸಂಸಾರ ನಡೆಸಲು ಸಾಧ್ಯವಾಗದೆ ವಿಚ್ಛೇದನ ಪಡೆದಿದ್ದ ಈಕೆಗೆ ಮೋಹನ್ ರಾಜ್ ಆಸರೆಯಾಗಿ ನಿಲ್ಲುವುದಾಗಿ ಭರವಸೆ ನೀಡಿದ್ದ. ಮೊದಲ ಮದುವೆ ಮತ್ತು ವಿಚ್ಛೇದನದ ಬಗ್ಗೆ ಸಂಪೂರ್ಣ ಅರಿವಿದ್ದರೂ ಮೋಹನ್ ರಾಜ್ ಆಕೆಯನ್ನು 2022ರಲ್ಲಿ ವಿವಾಹವಾಗಿದ್ದ.
ವಂಚನೆಯ ಜಾಲ:
ಮದುವೆಯಾದ ಆರಂಭದಲ್ಲಿ ದಂಪತಿಗಳ ಜೀವನ ಚೆನ್ನಾಗಿಯೇ ಇತ್ತು. 2023ರ ಫೆಬ್ರವರಿಯಲ್ಲಿ ಇವರಿಗೆ ಹೆಣ್ಣು ಮಗು ಕೂಡ ಜನಿಸಿತ್ತು. ಆದರೆ ಮಗು ಜನಿಸಿದ ಬಳಿಕ ಮೋಹನ್ ರಾಜ್ ,ನಾವಿಬ್ಬರು ಹೊಸದಾಗಿ ಮನೆ ಕಟ್ಟೋಣ, ಸುಂದರ ಭವಿಷ್ಯ ರೂಪಿಸೋಣ ಎಂದು ಮಹಿಳೆಯನ್ನು ನಂಬಿಸಿದ. ಪತಿಯ ಮಾತನ್ನು ನಂಬಿದ ಮಹಿಳೆ, ತನ್ನಲ್ಲಿದ್ದ ಚಿನ್ನಾಭರಣಗಳನ್ನು ಅಡವಿಟ್ಟು ಹಾಗೂ ವಿವಿಧ ಮೂಲಗಳಿಂದ ಸಾಲ ಪಡೆದು ಒಟ್ಟು 36 ಲಕ್ಷ ರೂಪಾಯಿ ಹಣವನ್ನು ಪತಿಗೆ ನೀಡಿದ್ದರು.
ಪರಾರಿಯಾದ ಕಿರಾತಕ:
ಹಣ ಕೈಸೇರುತ್ತಿದ್ದಂತೆಯೇ 2025ರಲ್ಲಿ ಮೋಹನ್ ರಾಜ್ ಏಕಾಏಕಿ ಮನೆ ಬಿಟ್ಟು ನಾಪತ್ತೆಯಾಗಿದ್ದಾನೆ. ಇಂದಿಗೂ ಆತ ಎಲ್ಲಿದ್ದಾನೆ ಎಂಬ ಸುಳಿವು ಸಿಕ್ಕಿಲ್ಲ. ಸಂತ್ರಸ್ತೆ ಹೇಗೋ ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಆತ ನೀನು ಯಾರು ಅಂತಲೇ ನನಗೆ ಗೊತ್ತಿಲ್ಲ ಎಂದು ಉಡಾಫೆಯಾಗಿ ಉತ್ತರಿಸಿ ಪೋನ್ ಕಟ್ ಮಾಡಿದ್ದಾನೆ.
ಪೊಲೀಸರ ವಿರುದ್ಧವೇ ಗಂಭೀರ ಆರೋಪ:
ಈ ಪ್ರಕರಣದಲ್ಲಿ ಸಂತ್ರಸ್ತೆ , ನ್ಯಾಯ ಕೇಳಲು ಮೋಹನ್ ರಾಜ್ ಮನೆಗೆ ಹೋದಾಗ ಅಲ್ಲಿನವರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಈವರೆಗೆ ನಾಲ್ಕು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬದಲಾಗಿ,ಮತ್ತೆ ದೂರು ನೀಡಿದರೆ ನಿನ್ನನ್ನೇ ಜೈಲಿಗೆ ಹಾಕ್ತೀವಿ ಎಂದು ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಆರೋಪಿಯೊಂದಿಗೆ ಪೊಲೀಸರು ಶಾಮೀಲಾಗಿದ್ದಾರೆ ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ. ತೀವ್ರ ಹೋರಾಟದ ಬಳಿಕ ಸದ್ಯ ಬನಶಂಕರಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
