ಬೆಂಗಳೂರು: ಉತ್ತರ ಕನ್ನಡ ಹಾಗೂ ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಪ್ರಸ್ತುತ ಮಡಗಾಂವ್ ಮತ್ತು ಮಂಗಳೂರು ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಂಗಳೂರಿನವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಈ ಮೂಲಕ ಬೆಂಗಳೂರು ಮತ್ತು ಮಡಗಾಂವ್ ನಡುವೆ ನೇರ ವಂದೇ ಭಾರತ್ ರೈಲು ಸಂಪರ್ಕ ಕಲ್ಪಿಸುವ ಮಹತ್ವದ ಹೆಜ್ಜೆ ಇಡಲಾಗಿದೆ.
ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪತ್ರದ ಮೂಲಕ ಅಧಿಕೃತ ಮಾಹಿತಿ ನೀಡಿದ್ದಾರೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಬೆಂಗಳೂರು ಮತ್ತು ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಬೇಕು ಎಂದು ಮಾರ್ಚ್ 11ರಂದು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಮನವಿಯನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ, ಈಗಾಗಲೇ ಸಂಚರಿಸುತ್ತಿರುವ ಮಡಗಾಂವ್–ಮಂಗಳೂರು ವಂದೇ ಭಾರತ್ ರೈಲನ್ನು ಬೆಂಗಳೂರಿನವರೆಗೆ ವಿಸ್ತರಿಸಲು ಆದೇಶಿಸಿದೆ ಎಂದು ಅವರು ಹೇಳಿದ್ದಾರೆ.
ಪರಿಷ್ಕೃತ ವೇಳಾಪಟ್ಟಿಯೊಂದಿಗೆ ಈ ರೈಲು 26655/26656 ಯಶವಂತಪುರ–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಹೆಸರಿನಲ್ಲಿ ಸಂಚರಿಸಲಿದೆ. ರೈಲು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರದೇಶಗಳಾದ ಮುರ್ಡೇಶ್ವರ, ಗೋಕರ್ಣ ಹಾಗೂ ಕಾರವಾರ ಮಾರ್ಗವಾಗಿ ಸಂಚರಿಸುವುದರಿಂದ ಈ ಭಾಗದ ಜನರಿಗೆ ರೈಲು ಸಂಪರ್ಕ ಮತ್ತಷ್ಟು ಸುಲಭವಾಗಲಿದೆ.
ಬೆಂಗಳೂರು ಮತ್ತು ಕರಾವಳಿ ಹಾಗೂ ಗೋವಾ ನಡುವಿನ ಸಂಪರ್ಕವನ್ನು ಈ ರೈಲು ಮತ್ತಷ್ಟು ವೇಗಗೊಳಿಸುವ ನಿರೀಕ್ಷೆಯಿದೆ. ಉದ್ಯೋಗ, ಶಿಕ್ಷಣ, ವ್ಯಾಪಾರ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಬೆಂಗಳೂರು ಮತ್ತು ಕರಾವಳಿ ಭಾಗಗಳ ನಡುವೆ ಪ್ರಯಾಣಿಸುವವರಿಗೆ ಇದರಿಂದ ಅನುಕೂಲವಾಗಲಿದೆ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಜನರು ಬೆಂಗಳೂರಿಗೆ ತೆರಳಲು ವೇಗದ ರೈಲು ಸಂಪರ್ಕ ದೊರೆಯಲಿದೆ.
ಮುರ್ಡೇಶ್ವರ, ಗೋಕರ್ಣ, ಕಾರವಾರ ಸೇರಿದಂತೆ ಪ್ರವಾಸಿ ಹಾಗೂ ಧಾರ್ಮಿಕವಾಗಿ ಮಹತ್ವ ಪಡೆದಿರುವ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಭಕ್ತರಿಗೂ ವಂದೇ ಭಾರತ್ ರೈಲು ಸಂಪರ್ಕದಿಂದ ಪ್ರಯೋಜನವಾಗಲಿದೆ. ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೂ ಈ ರೈಲು ಸೇವೆ ನೆರವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಉತ್ತರ ಕನ್ನಡ ಮತ್ತು ಕರಾವಳಿ ಭಾಗದ ಜನರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಬಹುದಿನಗಳ ಬೇಡಿಕೆ ಈಡೇರಿರುವುದರಿಂದ ಈ ಭಾಗದ ಜನರಲ್ಲಿ ಸಂತಸ ಮೂಡಿದೆ ಎಂದು ಅವರು ತಿಳಿಸಿದ್ದಾರೆ.
