ಬೆಂಗಳೂರಿನಲ್ಲಿ ಅನಧಿಕೃತ ಇ-ಕಾಮರ್ಸ್ ಗೋದಾಮುಗಳ ಮೇಲೆ ಎಫ್‌ಡಿಎ ಮಿಂಚಿನ ದಾಳಿ!

ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (45)

ಬೆಂಗಳೂರು: ಯಾವುದೇ ಅಧಿಕೃತ ಪರವಾನಗಿ ಪಡೆಯದೆ ಅಕ್ರಮವಾಗಿ ಔಷಧಗಳನ್ನು ಸಂಗ್ರಹಿಸಿ ವಿತರಣೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಇ-ಕಾಮರ್ಸ್ ಸಂಸ್ಥೆಗಳ ಗೋದಾಮುಗಳ ಮೇಲೆ ಕರ್ನಾಟಕ ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಏಕಕಾಲದಲ್ಲಿ ಮಿಂಚಿನ ದಾಳಿ ನಡೆಸಿದ್ದಾರೆ. ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ದೊರೆತ ನಿಖರ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ದಾಳಿಯ ವೇಳೆ ಔಷಧ ಸಂಗ್ರಹಣೆ ಹಾಗೂ ಮಾರಾಟಕ್ಕೆ ಅಗತ್ಯವಿರುವ ಮಾನ್ಯ ಪರವಾನಗಿ ಇಲ್ಲದ ಆವರಣಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಒಟ್ಟು ₹4,02,352 ಮೌಲ್ಯದ ಔಷಧಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ಔಷಧ ವ್ಯವಹಾರ ನಡೆಸುತ್ತಿರುವ ಸಂಸ್ಥೆಗಳ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆಜಾನ್ ಗೋದಾಮಿನ ಮೇಲೆ ದಾಳಿ; ₹2.45 ಲಕ್ಷ ಮೌಲ್ಯದ ಔಷಧ ವಶ

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ತಟ್ಟನಹಳ್ಳಿಯಲ್ಲಿರುವ ಮೆಸರ್ಸ್ ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಪರವಾನಗಿ ರಹಿತ ಆವರಣದ ಮೇಲೆ ರಾಜ್ಯ ಗುಪ್ತದಳ ವಿಭಾಗದ ಸಹಾಯಕ ಔಷಧ ನಿಯಂತ್ರಕ ಮನೋಹರ್ ಅವರ ನೇತೃತ್ವದ ತಂಡ ದಾಳಿ ನಡೆಸಿದೆ.

ಪರಿಶೀಲನೆ ವೇಳೆ ಔಷಧಗಳನ್ನು ಸಂಗ್ರಹಿಸಲು ಅಗತ್ಯವಿರುವ ಯಾವುದೇ ಅಧಿಕೃತ ಪರವಾನಗಿ ಇಲ್ಲದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಆವರಣದಲ್ಲಿ ನಿಯಮಬಾಹಿರವಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು ₹2,45,352 ಮೌಲ್ಯದ ಔಷಧಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ದೇವನಹಳ್ಳಿ ಏರೋಸ್ಪೇಸ್ ಪ್ರದೇಶದಲ್ಲೂ ಪರಿಶೀಲನೆ

ಇದೇ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಏರೋಸ್ಪೇಸ್ ಪ್ರದೇಶದಲ್ಲಿರುವ ಮೆಸರ್ಸ್ ಅಮೆಜಾನ್ ಸಂಸ್ಥೆಯ ಮತ್ತೊಂದು ಪರವಾನಗಿ ರಹಿತ ಆವರಣದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಿಲ್ಲಾ ಔಷಧ ಪರಿವೀಕ್ಷಕಿ ವಿಭಾ ಅವರ ನೇತೃತ್ವದಲ್ಲಿ ನಡೆದ ಪರಿಶೀಲನೆಯಲ್ಲಿ ಸುಮಾರು ₹1,57,000 ಮೌಲ್ಯದ ಔಷಧಗಳನ್ನು ಜಪ್ತಿ ಮಾಡಲಾಗಿದೆ.

ಎರಡೂ ಸ್ಥಳಗಳ ಪರಿಶೀಲನೆ ವೇಳೆ ಔಷಧ ಸಂಗ್ರಹಣೆಗೆ ಅಗತ್ಯವಿರುವ ಮಾನ್ಯ ದಾಖಲೆಗಳು ಹಾಗೂ ಪರವಾನಗಿಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ. ಔಷಧಗಳ ಸಂಗ್ರಹಣೆ, ವಿತರಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಇಲಾಖೆ ಇ-ಕಾಮರ್ಸ್ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ.

ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಹೆಸರಿನಲ್ಲಿ ಪರವಾನಗಿ ಇಲ್ಲದೆ ಔಷಧಗಳನ್ನು ದಾಸ್ತಾನು ಮಾಡುವ ಅಥವಾ ವಿತರಿಸುವ ಸಂಸ್ಥೆಗಳ ವಿರುದ್ಧ ಮುಂದಿನ ದಿನಗಳಲ್ಲೂ ನಿರಂತರವಾಗಿ ತಪಾಸಣೆ ಹಾಗೂ ದಾಳಿ ನಡೆಸಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಔಷಧಗಳ ಗುಣಮಟ್ಟ ಹಾಗೂ ಕಾನೂನುಬದ್ಧ ಮಾರಾಟ ಖಚಿತಪಡಿಸಿಕೊಳ್ಳಲು ಇಂತಹ ಕಾರ್ಯಾಚರಣೆಗಳನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆ.

Exit mobile version