ಬೆಂಗಳೂರು: ಈ ಬಾರಿಯ ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿ ಬೆಂಗಳೂರಿನ ಜನತೆ ಸಂಪ್ರದಾಯದ ಜೊತೆಗೆ ಆಧುನಿಕ ಜೀವನಶೈಲಿಯನ್ನೂ ಮೇಳೈಸಿ ಹಬ್ಬ ಆಚರಿಸಿದ್ದಾರೆ. ವಿಶೇಷವೆಂದರೆ, ಗಣಪತಿಗೆ ಅತ್ಯಂತ ಪ್ರಿಯವಾದ ಮೋದಕಕ್ಕಿಂತ ಹೆಚ್ಚಾಗಿ ಬೆಂಗಳೂರಿಗರು ‘ಲಡ್ಡು’ ಸವಿಯಲು ಹೆಚ್ಚು ಆಸಕ್ತಿ ತೋರಿದ್ದಾರೆ.
ಪ್ರಮುಖ ಕ್ವಿಕ್-ಕಾಮರ್ಸ್ ವೇದಿಕೆಯಾದ ಇನ್‌ಸ್ಟಾಮಾರ್ಟ್ ಸೆಪ್ಟೆಂಬರ್ 14 ರಿಂದ 23 ರವರೆಗೆ ಹಬ್ಬದ ದಿನಗಳಲ್ಲಿ ಬೆಂಗಳೂರಿನ ಗ್ರಾಹಕರು ಮಾಡಿದ ಆರ್ಡರ್‌ಗಳ ಆಧಾರದ ಮೇಲೆ ಈ ಕುತೂಹಲಕಾರಿ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.
ಬರೋಬ್ಬರಿ ₹33,860 ಮೊತ್ತದ ಒಂದೇ ಆರ್ಡರ್!
ಈ ಬಾರಿಯ ಹಬ್ಬದ ಶಾಪಿಂಗ್‌ನಲ್ಲಿ ಬೆಂಗಳೂರಿನ ಅತಿ ದೊಡ್ಡ ಸಿಂಗಲ್ ಆರ್ಡರ್ ಬರೋಬ್ಬರಿ 33,860 ರೂ. ಮುಟ್ಟಿ ಎಲ್ಲರ ಹುಬ್ಬೇರಿಸಿದೆ. ಹಬ್ಬದ ದಿನ ಬೆಳಗ್ಗೆ 8:12ಕ್ಕೆ ನಗರದ ಕೂಡ್ಲು ಗೇಟ್ ಭಾಗದ ಗ್ರಾಹಕರೊಬ್ಬರು ಈ ಬೃಹತ್ ಆರ್ಡರ್ ಮಾಡಿದ್ದಾರೆ. ಇದರಲ್ಲಿ 2 ಗ್ರಾಂ ತೂಕದ 24 ಕ್ಯಾರೆಟ್ ಚಿನ್ನದ ನಾಣ್ಯ, ತಾಜಾ ಮಲ್ಲಿಗೆ ಹೂವುಗಳು, ಮಾವಾ ಮೋದಕದ ಬಾಕ್ಸ್, ಗಾಜಿನ ಪಾತ್ರೆಗಳು ಹಾಗೂ ಆಭರಣಗಳು ಸೇರಿದ್ದವು.
ಮೋದಕಕ್ಕಿಂತ ಲಡ್ಡು ಮೇಲೆಯೇ ಹೆಚ್ಚು ಪ್ರೀತಿ!
ಗಣೇಶನ ಹಬ್ಬ ಅಂದರೆ ಸಾಮಾನ್ಯವಾಗಿ ಮೋದಕಕ್ಕೆ ಮೊದಲ ಆದ್ಯತೆ. ಆದರೆ ಬೆಂಗಳೂರಿನಲ್ಲಿ ಬುಕ್ ಆದ ಒಟ್ಟು ಸಿಹಿ ತಿಂಡಿಗಳಲ್ಲಿ ಶೇ. 25ರಷ್ಟು ಕೇವಲ ಲಡ್ಡುಗಳೇ ಆಗಿದ್ದವು. ಲಡ್ಡು ನಂತರದ ಸ್ಥಾನಗಳಲ್ಲಿ ಚಿಕ್ಕಿ ಮತ್ತು ಮೋದಕಗಳು ಸ್ಥಾನ ಪಡೆದಿವೆ. ಆದರೆ, ಹಬ್ಬದ ಹಿಂದಿನ ದಿನ ಮಾತ್ರ ಮೋದಕಕ್ಕೆ ಭಾರಿ ಬೇಡಿಕೆ ಬಂದಿದ್ದು, ನಿಮಿಷಕ್ಕೆ ಬರೋಬ್ಬರಿ 131 ಮೋದಕದ ಬಾಕ್ಸ್‌ಗಳು ಆರ್ಡರ್ ಆಗುವ ಮೂಲಕ ಹೊಸ ದಾಖಲೆ ನಿರ್ಮಿಸಿವೆ.
ಮುಂಜಾನೆ ಹೂವು, ಪೂಜಾ ಸಾಮಗ್ರಿಗಳ ಮಾರಾಟದ ಭರಾಟೆ
ಹಬ್ಬದ ದಿನ ಮುಂಜಾನೆ ಜನರು ಪೂಜೆಗೆ ಸಿದ್ಧತೆ ನಡೆಸುತ್ತಿದ್ದಂತೆ ಆನ್‌ಲೈನ್ ಆರ್ಡರ್‌ಗಳು ಗರಿಷ್ಠ ಮಟ್ಟ ತಲುಪಿದ್ದವು. ಬೆಳಗ್ಗೆ 7:42ರ ಸುಮಾರಿಗೆ ತಾಜಾ ಹೂವುಗಳಿಗಾಗಿ ಅತಿ ಹೆಚ್ಚು ಆರ್ಡರ್‌ಗಳು ಬಂದಿವೆ. ಅದರ ಬೆನ್ನಲ್ಲೇ ಬೆಳಗ್ಗೆ 7:57ಕ್ಕೆ ಪೂಜಾ ಸಾಮಗ್ರಿಗಳ ಆರ್ಡರ್ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಬ್ಬದ ಮುಂಚಿನ ವಾರಾಂತ್ಯದಲ್ಲಿ ಮನೆ ಕ್ಲೀನಿಂಗ್ ಸಾಮಗ್ರಿಗಳಿಗೂ ಅತ್ಯಧಿಕ ಬೇಡಿಕೆ ಕಂಡುಬಂದಿತ್ತು.
ಯಾವ ಬಡಾವಣೆಗಳಲ್ಲಿ ಹೆಚ್ಚು ಖರೀದಿ?
ಹಳೆಯ ಸಾಂಪ್ರದಾಯಿಕ ಬಡಾವಣೆಗಳಿಂದ ಹಿಡಿದು ಐಟಿ ಕಾರಿಡಾರ್‌ಗಳವರೆಗೂ ಇಡೀ ಬೆಂಗಳೂರು ಹಬ್ಬದ ಶಾಪಿಂಗ್‌ನಲ್ಲಿ ಮುಳುಗಿತ್ತು. ಅರಕೆರೆ, ವಿದ್ಯಾರಣ್ಯಪುರ, ಇಂದಿರಾನಗರ, ರಾಮಮೂರ್ತಿನಗರ, ಬೆಳ್ಳಂದೂರು-ಸರ್ಜಾಪುರ ಹಾಗೂ ಎಲೆಕ್ಟ್ರಾನಿಕ್ ಸಿಟಿ ಭಾಗದ ಜನರು ಅತಿ ಹೆಚ್ಚು ಆರ್ಡರ್‌ಗಳನ್ನು ಮಾಡುವ ಮೂಲಕ ಹಬ್ಬದ ಖರೀದಿಯಲ್ಲಿ ಮುಂಚೂಣಿಯಲ್ಲಿದ್ದರು.
ಒಟ್ಟಿನಲ್ಲಿ, ಬಂಗಾರದ ನಾಣ್ಯ, ಮುಂಜಾನೆಯ ಹೂವಿನ ಘಮಲು ಹಾಗೂ ಬಾಯಲ್ಲಿ ನೀರೂರಿಸುವ ಲಡ್ಡುಗಳೊಂದಿಗೆ ಬೆಂಗಳೂರಿಗರು ಈ ಬಾರಿಯ ಗಣೇಶ ಹಬ್ಬವನ್ನು ಅತ್ಯಂತ ಸಂಭ್ರಮ ಹಾಗೂ ಐಷಾರಾಮಿಯಾಗಿ ಆಚರಿಸಿದ್ದಾರೆ.
