ಫುಟ್‌ಪಾತ್ ಒತ್ತುವರಿ ತೆರವು ಅನಿವಾರ್ಯ: ವ್ಯಾಪಾರಿಗಳಿಗೆ ಕೃಷ್ಣಭೈರೇಗೌಡ ಮನವಿ

Untitled design

ಬೆಂಗಳೂರು (ಜುಲೈ 1): ರಾಜಧಾನಿ ಬೆಂಗಳೂರಿನಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯು ಇಂದು (ಬುಧವಾರ) ಆರಂಭವಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈ ಕುರಿತು ಸ್ಪಷ್ಟ ಎಚ್ಚರಿಕೆ ನೀಡಿದ್ದು, ಒತ್ತುವರಿದಾರರಿಗೆ ಭಾರಿ ದಂಡ ವಿಧಿಸುವುದರ ಜೊತೆಗೆ ಅವರ ಲೈಸೆನ್ಸ್‌ಗಳನ್ನು ರದ್ದುಪಡಿಸಲಾಗುವುದು ಎಂದು ತಿಳಿಸಿದ್ದಾರೆ.  

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣಭೈರೇಗೌಡ ಅವರು, ಫುಟ್‌ಪಾತ್ ಒತ್ತುವರಿಯಿಂದ ಪಾದಚಾರಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಅಪಘಾತಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಸಂಚರಿಸುವ ಪ್ರದೇಶಗಳಲ್ಲಿ ಮಾತ್ರ ತೆರವು ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದರು.

ಸುಪ್ರೀಂಕೋರ್ಟ್ ಆದೇಶದ ಅನುಸಾರ ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

“ನಗರದಲ್ಲಿ ಸುಮಾರು 15 ಸಾವಿರ ಕಿಲೋಮೀಟರ್ ಉದ್ದದ ಫುಟ್‌ಪಾತ್ ಇದೆ. ಅದರಲ್ಲಿ ಕೇವಲ 2 ಸಾವಿರ ಕಿಲೋಮೀಟರ್ ವ್ಯಾಪ್ತಿಯಲ್ಲಿರುವ, ಹೆಚ್ಚು ಜನರು ಬಳಸುವ ಪ್ರದೇಶಗಳ ಒತ್ತುವರಿಯನ್ನು ಮಾತ್ರ ತೆರವುಗೊಳಿಸಲಾಗುತ್ತಿದೆ. ಇದು ಒಟ್ಟು ಫುಟ್‌ಪಾತ್‌ನ ಸುಮಾರು 15 ಶೇಕಡಾ ಭಾಗ ಮಾತ್ರ,” ಎಂದು ಅವರು ಸ್ಪಷ್ಟಪಡಿಸಿದರು.

ಈ ಕ್ರಮದಿಂದ ಕೆಲವರಿಗೆ ತಾತ್ಕಾಲಿಕ ತೊಂದರೆ ಉಂಟಾಗಬಹುದು. ಆದರೆ ನಗರದ ನಾಗರಿಕರ ಸುರಕ್ಷತೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ಕಾರ್ಯ ಅನಿವಾರ್ಯವಾಗಿದೆ ಎಂದು ಸಚಿವರು ಹೇಳಿದರು.

ಒತ್ತುವರಿ ತೆರವು ಕಾರ್ಯಕ್ಕೆ ವ್ಯಾಪಾರಿಗಳು ಸಹಕರಿಸಬೇಕು ಎಂದು ಮನವಿ ಮಾಡಿದ ಅವರು, ಫುಟ್‌ಪಾತ್‌ಗಳನ್ನು ಪಾದಚಾರಿಗಳ ಬಳಕೆಗೆ ಮುಕ್ತಗೊಳಿಸುವಂತೆ ಸಾರ್ವಜನಿಕರಿಂದಲೂ ನಿರಂತರವಾಗಿ ಬೇಡಿಕೆ ಬರುತ್ತಿದೆ ಎಂದು ತಿಳಿಸಿದರು. 

ಒತ್ತುವರಿದಾರರು ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ನಿನ್ನೆ ವರೆಗೆ ಗಡುವು ನೀಡಲಾಗಿತ್ತು. ಆದರೆ ಅನೇಕ ಕೆಡೆಗಳಲ್ಲಿ ಈ ನಿಯಮವನ್ನು ಪಾಲಿಸಲಿಲ್ಲ. ಹೀಗಾಗಿ, ಇಂದು ಬುಧವಾರದಿಂದ ಈ ಕುರಿತಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರು ನಗರದ ಪ್ರಮುಖ ರಸ್ತೆಗಳು ಮತ್ತು ಫುಟ್ ಪಾತ್‌ಗಳ ಮೇಲೆ ಅಕ್ರಮವಾಗಿ ಅಂಗಡಿಗಳನ್ನು ವಿಸ್ತರಿಸಿರುವವರು, ಬೀದಿ ವ್ಯಾಪಾರಿಗಳು ಮತ್ತು ಕಟ್ಟಡಗಳ ಎದುರು ಸಾಮಗ್ರಿಗಳನ್ನು ರಾಶಿ ಹಾಕಿರುವವರ ವಿರುದ್ಧ ಈ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

Exit mobile version