ಬೆಂಗಳೂರು: ನಗರದಲ್ಲಿ ಫುಟ್‌ಪಾತ್‌ಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಆಡಳಿತ (ಜಿಬಿಎ) ಕೈಗೊಂಡಿರುವ ವಿಶೇಷ ಕಾರ್ಯಾಚರಣೆ ಶನಿವಾರವೂ ಮುಂದುವರಿದಿದೆ. ಒಂದು ಕಡೆ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿರುವವರ ವಿರುದ್ಧ ತೆರವು ಕಾರ್ಯಾಚರಣೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಹಲವು ದಿನಗಳಿಂದ ರಸ್ತೆ ಹಾಗೂ ಫುಟ್‌ಪಾತ್‌ಗಳ ಮೇಲೆ ನಿಲ್ಲಿಸಿ ಬೀಡಾಡಿಯಾಗಿ ಬಿಟ್ಟಿರುವ ವಾಹನಗಳನ್ನು ತೆರವುಗೊಳಿಸುವ ಅಭಿಯಾನಕ್ಕೂ ವೇಗ ನೀಡಲಾಗಿದೆ.
ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಈಗಾಗಲೇ ಬೀಡಾಡಿ ವಾಹನಗಳ ತೆರವು ಕಾರ್ಯಕ್ಕೆ ಚಾಲನೆ ನೀಡಿದ್ದು, ನಗರದಲ್ಲಿ ಸಂಚಾರ ಸುಗಮಗೊಳಿಸುವುದು ಹಾಗೂ ಸಾರ್ವಜನಿಕರಿಗೆ ಸುರಕ್ಷಿತ ಪಾದಚಾರಿ ಮಾರ್ಗ ಒದಗಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಹಲವು ತಿಂಗಳುಗಳಿಂದ ಒಂದೇ ಸ್ಥಳದಲ್ಲಿ ನಿಂತಿರುವ ಕಾರು, ಬೈಕ್ ಹಾಗೂ ಇತರ ವಾಹನಗಳನ್ನು ಗುರುತಿಸಿ ಅವುಗಳ ಮಾಲೀಕರಿಗೆ ಜಿಬಿಎ ಅಧಿಕಾರಿಗಳು ನೋಟಿಸ್ ಅಂಟಿಸುತ್ತಿದ್ದಾರೆ.
ನೋಟಿಸ್ ನೀಡಿದ ನಂತರ ವಾಹನ ಮಾಲೀಕರಿಗೆ ಒಂದು ವಾರದ ಕಾಲಾವಕಾಶ ನೀಡಲಾಗುತ್ತಿದೆ. ಈ ಅವಧಿಯೊಳಗೆ ವಾಹನವನ್ನು ತೆರವುಗೊಳಿಸದಿದ್ದರೆ, ಜಿಬಿಎ ಅಧಿಕಾರಿಗಳು ವಾಹನವನ್ನು ವಶಕ್ಕೆ ಪಡೆದು ಕಾನೂನು ಪ್ರಕ್ರಿಯೆಯಂತೆ ಹರಾಜು ಮಾಡುವ ಕ್ರಮ ಕೈಗೊಳ್ಳಲಿದ್ದಾರೆ. ವಾಹನಗಳು ರಸ್ತೆ ಹಾಗೂ ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆಗೆ ಅಗತ್ಯ ಮಾಹಿತಿಯನ್ನು ಬೆಂಗಳೂರು ಸಂಚಾರಿ ಪೊಲೀಸರು ಜಿಬಿಎಗೆ ಒದಗಿಸಿದ್ದಾರೆ. ಸಂಚಾರಿ ಪೊಲೀಸ್ ಇಲಾಖೆಯು ನಗರ ವ್ಯಾಪ್ತಿಯಲ್ಲಿರುವ ಬೀಡಾಡಿ ವಾಹನಗಳ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಿ ಹಸ್ತಾಂತರಿಸಿದ್ದು, ಅದರ ಆಧಾರದ ಮೇಲೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನೋಟಿಸ್ ಅಂಟಿಸುವ ಕಾರ್ಯ ಮುಂದುವರಿಸಿದ್ದಾರೆ.
ಲಭ್ಯ ಮಾಹಿತಿಯ ಪ್ರಕಾರ, ಜಿಬಿಎ ವ್ಯಾಪ್ತಿಯಲ್ಲಿ ಸದ್ಯ 1,571 ಬೀಡಾಡಿ ವಾಹನಗಳು ಪತ್ತೆಯಾಗಿವೆ. ಇವುಗಳಲ್ಲಿ ಹಲವು ವಾಹನಗಳು ತಿಂಗಳುಗಳ ಕಾಲ ಒಂದೇ ಸ್ಥಳದಲ್ಲಿ ನಿಂತಿದ್ದು, ಕೆಲವು ವಾಹನಗಳು ಸಂಪೂರ್ಣವಾಗಿ ಬಳಕೆಯಲ್ಲಿಲ್ಲ ಎಂಬುದು ಅಧಿಕಾರಿಗಳ ಪರಿಶೀಲನೆಯಲ್ಲಿ ಗೊತ್ತಾಗಿದೆ. ಇಂತಹ ವಾಹನಗಳು ರಸ್ತೆ ಸಂಚಾರಕ್ಕೆ ಅಡ್ಡಿಯಾಗುವುದರ ಜೊತೆಗೆ ಪರಿಸರದ ಸ್ವಚ್ಛತೆ ಹಾಗೂ ನಗರದ ಸೌಂದರ್ಯಕ್ಕೂ ಧಕ್ಕೆ ಉಂಟುಮಾಡುತ್ತಿವೆ.
ಇದರ ಜೊತೆಗೆ ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯವೂ ಸಮಾನಾಂತರವಾಗಿ ನಡೆಯುತ್ತಿದೆ. ಪಾದಚಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಆದ್ಯತೆ ನೀಡಿರುವ ಜಿಬಿಎ, ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಣ ಮುಕ್ತಗೊಳಿಸಲು ನಿರಂತರ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿಸಿದೆ. ನಗರವನ್ನು ಸ್ವಚ್ಛ, ಸುಂದರ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರೂಪಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿಯೂ ಇಂತಹ ವಿಶೇಷ ಅಭಿಯಾನಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
