ವಾಹನ ಸವಾರರೇ ಗಮನಿಸಿ: ಬೆಂಗಳೂರಿನ ಈ ಫ್ಲೈಓವರ್‌ಗಳಲ್ಲಿ ಸೆ.4ರಿಂದ ಹೊಸ ನಿಯಮ ಜಾರಿ

ಸಾವು (9)

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವುದು, ರಸ್ತೆ ಸುರಕ್ಷತೆ ಹೆಚ್ಚಿಸುವುದು ಹಾಗೂ ಅಪಘಾತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸಂಚಾರ ಪೊಲೀಸ್‌ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಬೆಂಗಳೂರಿನ ಪ್ರಮುಖ ಫ್ಲೈಓವರ್‌ಗಳು ಮತ್ತು ಎಲಿವೇಟೆಡ್‌ ಕಾರಿಡಾರ್‌ಗಳಲ್ಲಿ ಕೆಲವು ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ಸಮಯಾಧಾರಿತ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ.

ಈ ಹೊಸ ಸಂಚಾರ ನಿಯಮಗಳು ಸೆಪ್ಟೆಂಬರ್‌ 4ರಿಂದ ಜಾರಿಗೆ ಬರಲಿದ್ದು, ಎಲೆಕ್ಟ್ರಾನಿಕ್‌ ಸಿಟಿ ಎಲಿವೇಟೆಡ್‌ ಕಾರಿಡಾರ್‌ನಲ್ಲಿ ವಿಧಿಸಿರುವ ನಿರ್ಬಂಧಗಳು ಸೆಪ್ಟೆಂಬರ್‌ 11ರಿಂದ ಅನುಷ್ಠಾನಕ್ಕೆ ಬರಲಿವೆ. ವಾಹನಗಳ ಸಂಚಾರವನ್ನು ಸುಗಮಗೊಳಿಸುವುದು ಹಾಗೂ ಪ್ರಮುಖ ಮೇಲ್ಸೇತುವೆಗಳಲ್ಲಿ ಅಪಾಯಕಾರಿ ಸಂಚಾರವನ್ನು ನಿಯಂತ್ರಿಸುವುದು ಈ ನಿರ್ಧಾರದ ಉದ್ದೇಶವಾಗಿದೆ ಎಂದು ಸಂಚಾರ ಪೊಲೀಸ್‌ ಇಲಾಖೆ ತಿಳಿಸಿದೆ.

ಬಿಜಿಎಸ್‌ ಫ್ಲೈಓವರ್‌: ಸರಕು ವಾಹನಗಳಿಗೆ ನಿರ್ಬಂಧ

ಮೈಸೂರು ರಸ್ತೆಯ ಬಿಜಿಎಸ್‌ ಫ್ಲೈಓವರ್‌ನಲ್ಲಿ ಭಾರಿ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ದಿನದ 24 ಗಂಟೆಯೂ ನಿರ್ಬಂಧ ಇರಲಿದೆ. ಇದರ ಜೊತೆಗೆ ಬೆಳಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10ರವರೆಗೆ ಇತರೆ ಸರಕು ಸಾಗಣೆ ವಾಹನಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ. ಮೂರು ಚಕ್ರದ ಗೂಡ್ಸ್‌ ಆಟೋಗಳಿಗೂ ಈ ನಿರ್ಬಂಧ ಅನ್ವಯವಾಗಲಿದೆ.

ಪೀಣ್ಯ ಎಲಿವೇಟೆಡ್‌ ಕಾರಿಡಾರ್‌

ಪೀಣ್ಯ ಎಲಿವೇಟೆಡ್‌ ಕಾರಿಡಾರ್‌ನಲ್ಲಿ ಪ್ರಯಾಣಿಕರ ಆಟೋರಿಕ್ಷಾ ಹಾಗೂ ಮೂರು ಚಕ್ರದ ಗೂಡ್ಸ್‌ ಆಟೋಗಳ ಸಂಚಾರವನ್ನು ದಿನದ 24 ಗಂಟೆಯೂ ನಿಷೇಧಿಸಲಾಗಿದೆ. ಭಾರಿ ಮತ್ತು ಮಧ್ಯಮ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10ರವರೆಗೆ ಸಂಚಾರಕ್ಕೆ ಅವಕಾಶ ಇರುವುದಿಲ್ಲ.

ಎಲೆಕ್ಟ್ರಾನಿಕ್‌ ಸಿಟಿ ಎಲಿವೇಟೆಡ್‌ ಕಾರಿಡಾರ್‌

ಎಲೆಕ್ಟ್ರಾನಿಕ್‌ ಸಿಟಿ ಎಲಿವೇಟೆಡ್‌ ಕಾರಿಡಾರ್‌ನಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಭಾರಿ, ಮಧ್ಯಮ ಹಾಗೂ ಲಘು ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ದ್ವಿಚಕ್ರ ವಾಹನಗಳು, ಪ್ರಯಾಣಿಕರ ಆಟೋರಿಕ್ಷಾ ಮತ್ತು ಮೂರು ಚಕ್ರದ ಗೂಡ್ಸ್‌ ಆಟೋಗಳಿಗೆ ದಿನದ 24 ಗಂಟೆಯೂ ಸಂಚಾರ ನಿಷೇಧಿಸಲಾಗಿದೆ. ಈ ನಿಯಮ ಸೆಪ್ಟೆಂಬರ್‌ 11ರಿಂದ ಜಾರಿಗೆ ಬರಲಿದೆ.

ಸಿಲ್ಕ್‌ ಬೋರ್ಡ್‌–ರಾಗಿಗುಡ್ಡ ಡಬಲ್‌ ಡೆಕ್ಕರ್‌ ಫ್ಲೈಓವರ್‌

ಸಿಲ್ಕ್‌ ಬೋರ್ಡ್‌ನಿಂದ ರಾಗಿಗುಡ್ಡದವರೆಗೆ ನಿರ್ಮಿಸಿರುವ ಡಬಲ್‌ ಡೆಕ್ಕರ್‌ ಫ್ಲೈಓವರ್‌ನಲ್ಲಿ ಭಾರಿ ಸರಕು ಸಾಗಣೆ ವಾಹನಗಳಿಗೆ ದಿನದ 24 ಗಂಟೆಯೂ ಸಂಚಾರ ನಿರ್ಬಂಧಿಸಲಾಗಿದೆ.

ವಿಮಾನ ನಿಲ್ದಾಣ ಎಲಿವೇಟೆಡ್‌ ಕಾರಿಡಾರ್‌

ಸಂಜೀವನಗರ ಕ್ರಾಸ್‌ನಿಂದ ವಿದ್ಯಾಶಿಲ್ಪ ಜಂಕ್ಷನ್‌ವರೆಗಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್‌ ಕಾರಿಡಾರ್‌ನಲ್ಲೂ ನಿರ್ಬಂಧ ವಿಧಿಸಲಾಗಿದೆ. ಇಲ್ಲಿ ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳ ಸಂಚಾರಕ್ಕೆ 24 ಗಂಟೆಯೂ ಅವಕಾಶ ಇರುವುದಿಲ್ಲ. ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ನಿರ್ಬಂಧ ಇರಲಿದೆ.

ಹೊಸ ನಿಯಮಗಳನ್ನು ವಾಹನ ಸವಾರರು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದು, ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಪ್ರಮುಖ ಫ್ಲೈಓವರ್‌ಗಳಲ್ಲಿ ವಾಹನಗಳ ಸುಗಮ ಸಂಚಾರ ಹಾಗೂ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಈ ಕ್ರಮ ಮಹತ್ವದ್ದಾಗಿದೆ.

Exit mobile version