ಬೆಂಗಳೂರು ವಿದ್ಯುತ್ ಚಿತಾಗಾರಗಳಿಗೆ ಹೊಸ ನಿಯಮ: ಇನ್ನು ಅಧಿಕೃತ ವೆಬ್‌ಸೈಟ್‌ನಲ್ಲೇ ಬುಕ್ಕಿಂಗ್ ಕಡ್ಡಾಯ

Untitled design 2026 06 20T111538.301

ಬೆಂಗಳೂರು (ಜೂನ್‌20): ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಐದು ವಿದ್ಯುತ್‌ ಚಿತಾಗಾರಗಳಲ್ಲಿ ಶವಸಂಸ್ಕಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇನ್ನು ಮುಂದೆ ಶವಸಂಸ್ಕಾರಕ್ಕಾಗಿ ಬರುವ ಸಾರ್ವಜನಿಕರು ಕಡ್ಡಾಯವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿಯೇ ನೋಂದಣಿ ಮಾಡಿಸಬೇಕೆಂದು ಸೂಚಿಸಲಾಗಿದೆ. ಪ್ರತಿ ಶವಸಂಸ್ಕಾರಕ್ಕೆ  250 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದ್ದು, ಶುಲ್ಕ ಪಾವತಿಸಿದ ನಂತರ ಅಧಿಕೃತ ರಸೀದಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ಪಾಲಿಕೆಯು ಚಟ್ಟ, ಮಡಿಕೆ, ಪೂಜಾ ಸಾಮಗ್ರಿಗಳು ಸೇರಿದಂತೆ ಯಾವುದೇ ಹೆಚ್ಚುವರಿ ವಸ್ತುಗಳನ್ನು ಒದಗಿಸುವುದಿಲ್ಲ. ಇಂತಹ ವ್ಯವಸ್ಥೆಗಳನ್ನು ಮೃತರ ಕುಟುಂಬದವರೇ ಸ್ವತಃ ಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಇದುವರೆಗೆ ಕೆಲ ಖಾಸಗಿ ವ್ಯಕ್ತಿಗಳು ಮತ್ತು ಮಧ್ಯವರ್ತಿಗಳು ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಮಾಡುವ ನೆಪದಲ್ಲಿ ಕುಟುಂಬದವರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಶವಸಂಸ್ಕಾರಕ್ಕಾಗಿ ಬರುವವರು ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು. ಮನವಿ ಪತ್ರ, ಮರಣದ ವರದಿ ನಮೂನೆ-02, ವೈದ್ಯರ ದೃಢೀಕರಣ ಪತ್ರ ನಮೂನೆ-4A, ಶವಸಂಸ್ಕಾರ ದೃಢೀಕರಣ ಪತ್ರ, ಮೃತರ ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಟಿ.ಸಿ ಅಥವಾ ಪಾನ್ ಕಾರ್ಡ್ ಸೇರಿದಂತೆ ಯಾವುದೇ ಒಂದು ಗುರುತಿನ ದಾಖಲೆಯನ್ನು ಸಲ್ಲಿಸಬೇಕು. ಯಾವುದೇ ಗುರುತಿನ ಚೀಟಿ ಲಭ್ಯವಿಲ್ಲದಿದ್ದರೆ ನೋಟರಿ ಪ್ರಮಾಣಪತ್ರ ನೀಡಬೇಕು ಎಂದು ಸೂಚಿಸಲಾಗಿದೆ.

ಈ ಹೊಸ ನಿಯಮಗಳು ಗಾಯತ್ರಿನಗರದ ಹರಿಶ್ಚಂದ್ರಘಾಟ್ ವಿದ್ಯುತ್ ಚಿತಾಗಾರ, ಪೀಣ್ಯ ಮೊದಲನೇ ಹಂತದ ಪೀಣ್ಯ ವಿದ್ಯುತ್ ಚಿತಾಗಾರ, ಲಗ್ಗೆರೆ ಸಮೀಪದ ಪ್ರೇಮನಗರ ಸುಮನಹಳ್ಳಿ ವಿದ್ಯುತ್ ಚಿತಾಗಾರ, ಕೆಂಗೇರಿ ಉಪನಗರದ ಬಂಡೆಮಠ ವಿದ್ಯುತ್ ಚಿತಾಗಾರ ಹಾಗೂ ಬನಶಂಕರಿಯ ಯಾರಬ್ ನಗರದ ಬನಶಂಕರಿ ವಿದ್ಯುತ್ ಚಿತಾಗಾರಗಳಲ್ಲಿ ಜಾರಿಯಲ್ಲಿರಲಿವೆ.

 ಮಣ್ಣಿನಲ್ಲಿ ಹೂಳುವುದು ಅಥವಾ ಕಟ್ಟಿಗೆಯಿಂದ ಶವಸಂಸ್ಕಾರ ನಡೆಸುವ ಪದ್ಧತಿಗಳ ಕುರಿತು ಯಾವುದೇ ದೂರುಗಳು ಬಂದಿಲ್ಲ. ಆದರೆ ವಿದ್ಯುತ್ ಚಿತಾಗಾರಗಳಲ್ಲಿ ಪೂಜಾ ಸಾಮಗ್ರಿ ಮತ್ತು ಪಾಲಿಕೆಯ ಹೆಸರಿನಲ್ಲಿ ಕೆಲವರು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಎಲ್ಲಾ ವಿದ್ಯುತ್ ಚಿತಾಗಾರಗಳ ಎಂಜಿನಿಯರ್‌ಗಳ ಸಭೆ ನಡೆಸಿ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ ಎಂದು ಪಶ್ಚಿಮ ವಲಯದ ಪಾಲಿಕೆ ಆಯುಕ್ತ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಇಲ್ಲಿಯವರೆಗೆ ಖಾಸಗಿ ವ್ಯಕ್ತಿಗಳು ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಮಾಡಿಕೊಟ್ಟು ಹೆಚ್ಚಿನ ಮೊತ್ತವನ್ನು ಕುಟುಂಬದವರಿಂದ ಪಡೆಯುತ್ತಿದ್ದರು. ಈ ರೀತಿಯ ದುರ್ಬಳಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಪಾಲಿಕೆಯು ಕೇವಲ 250 ರೂಪಾಯಿ ಶುಲ್ಕ ನಿಗದಿಪಡಿಸಿದ್ದು, ಅಧಿಕೃತ ವೆಬ್‌ಸೈಟ್ ಮೂಲಕವೇ ಬುಕ್ಕಿಂಗ್ ಮಾಡಬೇಕೆಂಬ ನಿಯಮವನ್ನು ಜಾರಿಗೆ ತಂದಿದೆ. ಹಣವಿರುವವರು ತಮ್ಮ ಇಚ್ಛೆಯಂತೆ ಹೆಚ್ಚುವರಿ ವೆಚ್ಚದಲ್ಲಿ ಶವಸಂಸ್ಕಾರ ಮಾಡಿಕೊಳ್ಳಬಹುದು, ಆದರೆ ಪಾಲಿಕೆಯ ನಿಗದಿತ ಶುಲ್ಕ ಮಾತ್ರ 250 ರೂಪಾಯಿ ಎಂದು ಆಯುಕ್ತರು ತಿಳಿಸಿದ್ದಾರೆ.

ಇನ್ನೊಂದೆಡೆ, ಉತ್ತರ ಪಾಲಿಕೆ ವ್ಯಾಪ್ತಿಯ ಚಿರಶಾಂತಿಧಾಮ ಮತ್ತು ಮುಕ್ತಿಧಾಮ ವಿದ್ಯುತ್ ಚಿತಾಗಾರಗಳಲ್ಲಿ ಸ್ಲಾಟ್ ಕಾಯ್ದಿರಿಸುವ ವೇಳೆ ಗೂಗಲ್‌ನಲ್ಲಿ ಕಾಣಿಸುವ ನಕಲಿ ಜಾಲತಾಣಗಳನ್ನು ನಂಬಬಾರದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಅಧಿಕೃತ ಬಿಬಿಎಂಪಿ ವೆಬ್‌ಸೈಟ್‌ಗಳ ಮೂಲಕವೇ ಬುಕ್ಕಿಂಗ್ ಮಾಡಬೇಕು ಎಂದು ಉತ್ತರ ವಲಯದ ಪಾಲಿಕೆ ಮನವಿ ಮಾಡಿದೆ. ಸಾರ್ವಜನಿಕರು ಯಾವುದೇ ಸಮಸ್ಯೆ ಅಥವಾ ದೂರುಗಳಿದ್ದಲ್ಲಿ ಪಶ್ಚಿಮ ನಗರ ಪಾಲಿಕೆ ವಿಭಾಗದ ಆಯುಕ್ತರ ಕಚೇರಿಗೆ ಲಿಖಿತವಾಗಿ ದೂರು ಸಲ್ಲಿಸಬಹುದಾಗಿದೆ.

Exit mobile version