ಬೆಂಗಳೂರು: ತನ್ನ ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ ಎಂಬ ಒಂದೇ ಕಾರಣಕ್ಕೆ, ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಭೀಕರ ಘಟನೆ ನಗರದ ಭೋವಿ ಕಾಲೋನಿಯಲ್ಲಿ ಜರುಗಿದೆ.
ಗಾಯಗೊಂಡ ಮಹಿಳೆಯನ್ನು 40 ವರ್ಷದ ಗೀತಾ ಎಂದು ಗುರುತಿಸಲಾಗಿದ್ದು, ಅವರು ಬಸವೇಶ್ವರನಗರದ ಭೋವಿ ಕಾಲೋನಿಯಲ್ಲಿ ಸಣ್ಣದೊಂದು ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದರು. ಈ ಕೃತ್ಯ ಎಸಗಿದ ಆರೋಪಿಯನ್ನು ಮುತ್ತು ಎಂದು ಗುರುತಿಸಲಾಗಿದೆ. ಆರೋಪಿ ಮುತ್ತು ಅದೇ ಪ್ರದೇಶದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿದ್ದ ಎನ್ನಲಾಗಿದ್ದು, ಈ ವೇಳೆ ಗೀತಾ ಅವರ ಕುಟುಂಬದೊಂದಿಗೆ ಪರಿಚಯ ಬೆಳೆಸಿಕೊಂಡಿದ್ದ.
ಪೊಲೀಸ್ ಮೂಲಗಳ ಪ್ರಕಾರ, ಮುತ್ತು ಮತ್ತು ಗೀತಾ ಅವರ ಕುಟುಂಬದ ನಡುವೆ ಆತ್ಮೀಯತೆ ಬೆಳೆದಿತ್ತು. ಗೀತಾ, ಆಕೆಯ 19 ವರ್ಷದ ಮಗಳು ಹಾಗೂ ಆರೋಪಿ ಮುತ್ತು ಮೂವರೂ ಒಂದೇ ಮನೆಯಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ. ಆದರೆ ಕೆಲ ದಿನಗಲ ಬಳಿಕ ಮುತ್ತು, ಗೀತಾ ಅವರ 19 ವರ್ಷದ ಮಗಳನ್ನು ಮದುವೆ ಮಾಡಿಕೊಡುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದ.
ಗೀತಾ ಮುತ್ತುನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಇದರಿಂದ ಕೆರಳಿದ ಮುತ್ತು, ಬುಧವಾರದಂದು ಗೀತಾ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ವೇಳೆ ಗೀತಾ ಜೋರಾಗಿ ಚೀರಿದ್ದಾಳೆ ಬಳಿಕ ನೆರೆಹೊರೆಯವರು ಸಳಕ್ಕೆ ಬರುವಷ್ಟರಲ್ಲಿ ಆರೋಪಿ ಮುತ್ತು ಪರಾರಿಗಾಗಿದ್ದಾನೆ.
ತೀವ್ರವಾಗಿ ಗಾಯಗೊಂಡಿರುವ ಗೀತಾಳನ್ನ ತಕ್ಷಣವೇ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಬೆಂಗಳೂರಿನಲ್ಲಿ ಯುವತಿಯ ಮೇಲೆ ನಡುರಸ್ತೆಯಲ್ಲೇ ಕ್ರೂರ ಹಲ್ಲೆ!
ಬೆಂಗಳೂರು: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಯುವಕನೊಬ್ಬ ಯುವತಿಯ ಮೇಲೆ ನಡುರಸ್ತೆಯಲ್ಲೇ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಆರೋಪಿ ನವೀನ್ ಕುಮಾರ್ ಮತ್ತು ಸಂತ್ರಸ್ತ ಯುವತಿಗೆ 2024ರಲ್ಲಿ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು. ಆರಂಭದಲ್ಲಿ ಸ್ನೇಹದಿಂದ ಕೂಡಿದ್ದ ಇವರ ಸಂಬಂಧ, ನಂತರ ಫೋನ್ ಕರೆ ಮತ್ತು ಮೆಸೇಜ್‌ಗಳ ಮೂಲಕ ಮುಂದುವರಿದಿತ್ತು.
ನವೀನ್ ಕುಮಾರ್ ಯುವತಿಯನ್ನು ಪ್ರೀತಿಸುವಂತೆ ನಿರಂತರವಾಗಿ ಬಲವಂತ ಮಾಡುತ್ತಿದ್ದ. ಆದರೆ ಯುವತಿಗೆ ಆತನ ನಡವಳಿಕೆ ಇಷ್ಟವಾಗದ ಕಾರಣ ಆತನಿಂದ ದೂರವಿರಲು ಪ್ರಯತ್ನಿಸಿದ್ದಳು. ಇಬ್ಬರ ನಡುವೆ ಪ್ರೀತಿಯ ವಿಚಾರ ಮಾತ್ರವಲ್ಲದೆ ಹಣಕಾಸಿನ ವಿಚಾರವಾಗಿಯೂ ವೈಮನಸ್ಸು ಇತ್ತು ಎಂದು ತಿಳಿದುಬಂದಿದೆ. ಯುವತಿ ಆತನ ಪ್ರೀತಿಯ ಪ್ರಸ್ತಾವನೆಯನ್ನು ನಿರಾಕರಿಸಿದ್ದಾಳೆ ಹೀಗಾಗಿ ಆರೋಪಿ ಯುವತಿಯ ಮೇಲೆ ನಡುರಸ್ತೆಯಲ್ಲಿ ಹಲ್ಲೆ ಮಾಡಿದ್ದಾನೆ.
ಸೋಮವಾರ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಯುವತಿಯ ಪಿಜಿ (PG) ಬಳಿ ನವೀನ್ ಕಾರಿನಲ್ಲಿ ಬಂದಿದ್ದಾನೆ. ಕಾರಿನ ಹಾರನ್ ಹೊಡೆದು ಯುವತಿಯನ್ನು ಹೊರಗೆ ಕರೆಯಲು ಯತ್ನಿಸಿದ್ದಾನೆ. ಈ ವೇಳೆ ಯುವತಿಯ ಜೊತೆಗಿದ್ದ ಸ್ನೇಹಿತೆ ಪರಿಸ್ಥಿತಿ ಕಂಡು ಪೊಲೀಸರಿಗೆ ಕರೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾಳೆ. ಇದರಿಂದ ಭಯಗೊಂಡ ಯುವತಿ ಹಿಂದಕ್ಕೆ ಸರಿಯಲು ಯತ್ನಿಸಿದಾಗ, ನವೀನ್ ಕಾರಿನಿಂದ ಇಳಿದು ಅಟ್ಟಹಾಸ ಮೆರೆದಿದ್ದಾನೆ.
ಯುವತಿಯ ವ್ಯಾನಿಟಿ ಬ್ಯಾಗ್ ಕಸಿದುಕೊಂಡ ನವೀನ್, ಅದರಲ್ಲಿ ಏನನ್ನೋ ಹುಡುಕಾಡಿದ್ದಾನೆ. ಬಳಿಕ ಯುವತಿ ತಪ್ಪಿಸಿಕೊಳ್ಳಲು ಓಡಿದಾಗ ಆಕೆಯನ್ನು ಬೆನ್ನಟ್ಟಿ, ಹಿಡಿದು ಎಳೆದಾಡಿ ಕೆನ್ನೆಗೆ ಬಾರಿಸಿದ್ದಾನೆ. ಒಂದು ಬಾರಿ ಮಾತ್ರವಲ್ಲದೆ ಹಲವು ಬಾರಿ ಬಲವಾಗಿ ಹಲ್ಲೆ ನಡೆಸಿದ್ದಾನೆ. ಈ ಹಲ್ಲೆಯ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಘಟನೆ ನಡೆದ ಬೆನ್ನಲ್ಲೇ ನವೀನ್ ಸ್ಥಳದಿಂದ ಪರಾರಿಯಾಗಿದ್ದ. ಆದರೆ ಸಂತ್ರಸ್ತೆಯ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಜ್ಞಾನಭಾರತಿ ಪೊಲೀಸರು, ತಾಂತ್ರಿಕ ದಾಖಲೆಗಳ ಆಧಾರದ ಮೇಲೆ ಆರೋಪಿ ನವೀನ್ ಕುಮಾರ್‌ನನ್ನು ಬಂಧಿಸಿದ್ದಾರೆ. ಸದ್ಯ ಆತನನ್ನು ವಿಚಾರಣೆಗೊಳಪಡಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
