ಬೆಂಗಳೂರು: ಪತಿಯೊಬ್ಬನು ತನ್ನ ಪತ್ನಿಯ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಲು ಮಲಗುವ ಕೋಣೆಯಲ್ಲಿ ಕ್ಯಾಮೆರಾ ಅಳವಡಿಸಿದ್ದು, ನಂತರ ಆ ವೀಡಿಯೊಗಳನ್ನು ಬಳಸಿಕೊಂಡು ಅವಳನ್ನು ವಿದೇಶಿ ಗ್ರಾಹಕರೊಂದಿಗೆ ದೈಹಿಕ ಸಂಬಂಧ ಹೊಂದಲು ಒತ್ತಾಯಿಸಿದ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ನಡೆದಿದೆ.
ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ, ಆರೋಪಿ ಪತಿ ಸೈಯದ್ ಇನಾಮುಲ್ ಹಕ್ ತನ್ನ ಪತ್ನಿಯ ಒಪ್ಪಿಗೆಯಿಲ್ಲದೆ ಅವರ ಖಾಸಗಿ ಕ್ಷಣಗಳ ಫೋಟೋಗಳು ಮತ್ತು ವೀಡಿಯೊಗಳನ್ನು ರಹಸ್ಯವಾಗಿ ಬೆಡ್‌ರೂಮ್‌ನಲ್ಲಿ ಅಳವಡಿಸಿದ್ದ ಸಿಕ್ರೆಟ್ ಕ್ಯಾಮೆರಾದಿಂದ ರೆಕಾರ್ಡ್ ಮಾಡಿದ್ದಾನೆ. ಈ ವೀಡಿಯೊಗಳನ್ನು ಅವನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ ಮತ್ತು ಅವುಗಳನ್ನು ಆನ್ಲೈನ್‌ನಲ್ಲಿ ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಮಹಿಳೆ ತನ್ನ ದೂರಿನಲ್ಲಿ, ಆರೋಪಿಯು ನನ್ನ ಒಪ್ಪಿಗೆಯಿಲ್ಲದೆ ಖಾಸಗಿ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿದಿದ್ದಾನೆ ಮತ್ತು ವಿದೇಶದಲ್ಲಿರುವ ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ನಾನು ಅವರು ಹೇಳಿದವರ ಜೊತೆ ಮಲಗಿದಿದ್ದರೆ ಫೋಟೋಗಳು ಮತ್ತು ವೀಡಿಯೊಗಳನ್ನು ಆನ್ಲೈನ್‌ನಲ್ಲಿ ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಅವರು ತಮ್ಮ ದೂರಿನಲ್ಲಿ ಸೂಚಿಸಿದ್ದಾರೆ.
ಇದರ ಜೊತೆಗೆ ಪತಿ ತಾನು ಈಗಾಗಲೇ ಮದುವೆಯಾಗಿದ್ದಾನೆ ಆದರೆ ಅದನ್ನ ತಿಳಿಸದೇ ತನ್ನನ್ನು ವಂಚನೆ ಮಾಡಿ ಮದುವೆಯಾಗಿದ್ದಾನೆ. ಅವನು ನನ್ನ ಮೇಲೆ ದೈಹಿಕ ಕಿರುಕುಳ ಮತ್ತು ಹಲ್ಲೆ ನಡೆಸಿದ್ದಾನೆ ಎಂದೂ ಮಹಿಳೆ ಆರೋಪಿಸಿದ್ದಾರೆ.
ಪುಟ್ಟೇನಹಳ್ಳಿ ಪೊಲೀಸರು ಈ ಆರೋಪಗಳ ಮೇರೆಗೆ ಆರೋಪಿ ಪತಿ ಸೈಯದ್ ಇನಾಮುಲ್ ಹಕ್ ಮತ್ತು ಇತರ ಮೂವರು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಈ ಕುರಿತು ತನಿಖೆ ಆರಂಭಿಸಿದ್ದಾರೆ.